ಯುವಜನ

ಕೊಡಗಿನಲ್ಲಿ  ಕೇವಲ 2 ವರ್ಷದಲ್ಲಿ 81 ಅಪ್ರಾಪ್ತ ಬಾಲಕಿಯರು ಗರ್ಭಿಣಿ, ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ!!

Views: 32

ಕನ್ನಡ ಕರಾವಳಿ ಸುದ್ದಿ: ಭವಿಷ್ಯದ ಕನಸು ಕಾಣಬೇಕಾದ ವಯಸ್ಸಿನಲ್ಲೇ ಬಾಲಕಿಯರು ಗರ್ಭಿಣಿಯಾಗುತ್ತಿರುವ ಆಘಾತಕಾರಿ ಸಂಗತಿ ಕೊಡಗಿನಲ್ಲಿ ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳಲ್ಲಿ 81 ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಇದೇ ಅವಧಿಯಲ್ಲಿ 225 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ತೋಟದ ಲೈನ್‌ಮನೆಗಳ ವ್ಯಾಪ್ತಿಯಲ್ಲೇ 97 ಪ್ರಕರಣಗಳು ವರದಿಯಾಗಿರುವುದು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.

ಕೊಡಗಿನ ಕೆಲವು ಭಾಗಗಳಲ್ಲಿ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯವಿವಾಹದಂತಹ ಘಟನೆಗಳು ಹೆಚ್ಚಾಗಿ ಗಮನಕ್ಕೆ ಬರುತ್ತಿವೆ. ಅದರಲ್ಲೂ ಆದಿವಾಸಿ ಸಮುದಾಯಗಳು ಹಾಗೂ ತೋಟದ ಲೈನ್‌ಮನೆಗಳಲ್ಲಿ ವಾಸಿಸುವ ಕುಟುಂಬಗಳ ಮಕ್ಕಳ ಪರಿಸ್ಥಿತಿ ಕಳವಳಕಾರಿಯಾಗಿದೆ.

ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸಿಸುವುದು, ಮಕ್ಕಳಿಗೆ ಪ್ರತ್ಯೇಕ ಜಾಗದ ಕೊರತೆ, ಬಡತನ, ಲೈಂಗಿಕ ಶಿಕ್ಷಣದ ಅಭಾವ ಮತ್ತು ವೈಯಕ್ತಿಕ ಸುರಕ್ಷತೆಯ ಬಗ್ಗೆ ಅರಿವು ಇಲ್ಲದಿರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿರಬಹುದು ಎಂದು ಕಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ಇನ್ನು, ಮಕ್ಕಳ ರಕ್ಷಣಾ ಇಲಾಖೆಯ ಮಾಹಿತಿಯ ಪ್ರಕಾರ, ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 95 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಏಪ್ರಿಲ್‌ವರೆಗೆ 26 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳಿಗಿಂತ ಪೋಕ್ಸೋ ಪ್ರಕರಣಗಳೇ ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಇಲಾಖೆ ತಿಳಿಸಿದೆ.

ಪ್ರಕರಣಗಳು ಹೆಚ್ಚಾಗಿ ವರದಿಯಾಗುವ ಪ್ರದೇಶಗಳನ್ನು ಗುರುತಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಐಟಿಡಿಪಿ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಆದಿವಾಸಿ ಸಮುದಾಯಗಳ ನಡುವೆ ಮಕ್ಕಳ ಹಕ್ಕುಗಳು, ಸುರಕ್ಷತೆ ಹಾಗೂ ಕಾನೂನುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.

ಮಕ್ಕಳ ಸಹಾಯವಾಣಿ 1098 ಮತ್ತು ಮಹಿಳಾ ಸಹಾಯವಾಣಿ 181 ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಸಂತ್ರಸ್ತರು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ದೌರ್ಜನ್ಯ ಕಂಡುಬಂದರೆ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕೇವಲ ಕಾನೂನು ಕ್ರಮ ಸಾಕಾಗುವುದಿಲ್ಲ. ಕುಟುಂಬಗಳಿಗೆ ಸೂಕ್ತ ವಸತಿ ಸೌಲಭ್ಯ, ಮಕ್ಕಳಿಗೆ ವಯಸ್ಸಿಗೆ ತಕ್ಕ ಲೈಂಗಿಕ ಶಿಕ್ಷಣ, ವೈಯಕ್ತಿಕ ಸುರಕ್ಷತೆಯ ಅರಿವು ಮತ್ತು ನಿರಂತರ ಮೇಲ್ವಿಚಾರಣೆಯೂ ಅಗತ್ಯ. ಕೊಡಗಿನ ಮಕ್ಕಳ ಬಾಲ್ಯ ಸುರಕ್ಷಿತವಾಗಿರಬೇಕಾದರೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ.

Related Articles

Back to top button
error: Content is protected !!