ಇತರೆ

ಕುಂದಾಪುರ: ಅರಾಟೆ ಸೇತುವೆ ಬಳಿ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ: 26ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ, ಮೂವರ ಸ್ಥಿತಿ ಗಂಭೀರ

Views: 0

ಕನ್ನಡ ಕರಾವಳಿ ಸುದ್ದಿ: ಬೈಂದೂರು ತಾಲೂಕಿನ ಅರಾಟೆ ಸೇತುವೆ ಸಮೀಪ ರವಿವಾರ (ಅ. 25) ಬೆಳಗ್ಗೆ ಎರಡು ಬಸ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 26 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಂದೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕುಂದಾಪುರದಿಂದ ಸಾಗರದ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯರು ಹಾಗೂ ಆಪತ್ಬಾಂಧವ ತಂಡಗಳ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಯಿತು.

ಗಾಯಗೊಂಡವರ ಪೈಕಿ 23 ಮಂದಿಯನ್ನು ಕುಂದಾಪುರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಟೀಮ್ ಎಂ.ಎಚ್.ಐ ಆಪತ್ಬಾಂಧವ ಆಂಬುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಅಬ್ರಾರ್ ಹಾಗೂ ಸ್ವಯಂಸೇವಕ ವಿಕಾಸ್ ಅವರು ಎರಡು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಹೆಮ್ಮಾಡಿಯ ರಿಕ್ಷಾ ಚಾಲಕರಾದ ಶರತ್, ಕೃಷ್ಣ ಹಾಗೂ ಪ್ರಶಾಂತ್ ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾದರು.

ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!