ಶಿಕ್ಷಣ

ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಯತ್ನ: 288 ಉಪನ್ಯಾಸಕರು ಆಯ್ಕೆ ಪ್ರಕ್ರಿಯೆಯಿಂದ ಹೊರಕ್ಕೆ, ಕಾನೂನು ಕ್ರಮಕ್ಕೆ ಸೂಚನೆ 

Views: 33

ಕನ್ನಡ ಕರಾವಳಿ ಸುದ್ದಿ: ನಕಲಿ ದಾಖಲೆ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ 288 ಅತಿಥಿ ಉಪನ್ಯಾಸಕರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿ, ದಾಖಲೆಗಳನ್ನು ಸಲ್ಲಿಸಿರುವ ಅತಿಥಿ ಉಪನ್ಯಾಸಕರಲ್ಲಿ ಅಧಿಕೃತ ಪರಿಶೀಲನಾ ಕಾರ್ಯವಿಧಾನದ ಪ್ರಕಾರ ನಕಲಿ ಅಥವಾ ಅಮಾನ್ಯ ದಾಖಲೆಗಳನ್ನು ಸಲ್ಲಿಸಿದ್ದ 288 ಅತಿಥಿ ಉಪನ್ಯಾಸಕರನ್ನು 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಸರ್ಕಾರಕ್ಕೆ ಸುಳ್ಳು ಮಾಹಿತಿ/ದಾಖಲೆ ನೀಡಿ ವಂಚನೆ ಎಸಗಲು ಪ್ರಯತ್ನಿಸಿರುವುದರಿಂದ ಅವರುಗಳ ವಿರುದ್ಧ ಭಾರತ ನ್ಯಾಯ ಸಂಹಿತೆಯಡಿ ಅನ್ವಯವಾಗುವ ನಿಬಂಧನೆಗಳಡಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪ್ರಾಂಶುಪಾಲರಿಗೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದೆ.

2025-26ನೇ ಸಾಲಿನಲ್ಲಿ ಆನ್‌ಲೈನ್ ಕೌನ್ಸಲಿಂಗ್ ಮೂಲಕ ಕಾಲೇಜು ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ 11,010 ಅತಿಥಿ ಉಪನ್ಯಾಸಕರುಗಳ ಸ್ನಾತಕೋತ್ತರ ಪದವಿ ಅಂಕಪಟ್ಟಿ ಮತ್ತು ಎನ್‌ಇಟಿ, ಎಸ್‌ಎಲ್‌ಇಟಿ, ಕೆ-ಎಸ್‌ಇ ಟಿ, ಪಿಎಚ್ಡಿ, ಎಂಫಿಲ್ ಹಾಗೂ ವಿಕಲಚೇತನ ಪ್ರಮಾಣ ಪತ್ರ ಮತ್ತು ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳನ್ನು ಅಧಿಕೃತ ಪರಿಶೀಲನಾ ಕಾರ್ಯವಿಧಾನದ (Standard Operating Procedure) (SOP) ಪ್ರಾಂಶುಪಾಲರ ಹಂತದಲ್ಲಿ ಪರಿಶೀಲನೆ ನಡೆಸಲಾಗಿರುತ್ತದೆ.

ಅದರಂತೆ, ಬಹುತೇಕ ಅತಿಥಿ ಉಪನ್ಯಾಸಕರ ದಾಖಲೆಗಳನ್ನು ಕಾಲೇಜುಗಳ ಹಂತದಲ್ಲಿ ಪ್ರಾಂಶುಪಾಲರ ನೇತೃತ್ವದ ಸಮಿತಿಗಳು ಪರಿಶೀಲಿಸಿದ್ದು, ಕೆಲವು ಅತಿಥಿ ಉಪನ್ಯಾಸಕರು ರಾಜೀನಾಮೆ, ಗೈರು ಹಾಜರಿ ಅನಾರೋಗ್ಯದ ಕಾರಣ ದಾಖಲೆಗಳನ್ನು ಸಲ್ಲಿಸದಿರುವ ಪ್ರಕರಣಗಳಲ್ಲಿ ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಪರಿಶೀಲನೆ ನಡೆಸಿರುವುದಿಲ್ಲ. ಅಲ್ಲದೆ ಹೊರ ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಹತೆ ಅಂಕ ಪಟ್ಟಿಗಳ ನೈಜತೆ ವರದಿಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿದ್ದು ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಇಲಾಖೆ ತಿಳಿಸಿದೆ.

 

Related Articles

Back to top button
error: Content is protected !!