ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ಸಂಸ್ಕಾರ ಸಿಂಚನ ವಿಶೇಷ ಕಾರ್ಯಕ್ರಮ
ತಾಯಿಯನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡುವುದರ ಜೊತೆಗೆ ತಂದೆಯನ್ನು ಅತ್ಯಂತ ಗೌರವದಿಂದ ಕಾಣಬೇಕು. ಹೆತ್ತ ತಾಯಿಯ ಋಣ ಹಾಗೂ ಹೊತ್ತ ನೆಲದ ಋಣ ತೀರಿಸಲಾಗದ ಸಂಪತ್ತಾಗಿದೆ. ಮಕ್ಕಳು ಸಂಸ್ಕಾರಯುತರಾಗಿ ಬೆಳೆದಾಗ ಸಮಾಜದಲ್ಲಿನ ಉನ್ನತ ಸ್ಥಾನಮಾನಗಳು ಹಾಗೂ ಗೌರವ ದೊರಕಿ ಬದುಕು ಪಾವನವಾಗುತ್ತದೆ---ದಾಮೋದರ ಶರ್ಮ
ಕನ್ನಡ ಕರಾವಳಿ ಸುದ್ದಿ:ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಕಾರ – ಸಿಂಚನ – ಹೆತ್ತವರ ಪಾದಗಳಿಗೆ ನಮನ ಎನ್ನುವ ವಿಶೇಷ ಉಪನ್ಯಾಸ ಹಾಗೂ ಮಾತೃ ಪಿತೃಗಳ ಪಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಎನ್ ಆರ್ ದಾಮೋದರ ಶರ್ಮ ರವರು ಮಾತನಾಡುತ್ತಾ – ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿಯರಿಗೆ ಪೂಜನೀಯ ಸ್ಥಾನವಿದೆ. ಇವರನ್ನು ಪ್ರತ್ಯಕ್ಷ ದೇವರೆಂದೇ ಒಪ್ಪಿ ಆಧರಿಸಿ ಗೌರವಿಸುವ ಪರಂಪರೆ ನಮ್ಮದು. ತಾಯಿಯನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡುವುದರ ಜೊತೆಗೆ ತಂದೆಯನ್ನು ಅತ್ಯಂತ ಗೌರವದಿಂದ ಕಾಣಬೇಕು. ಹೆತ್ತ ತಾಯಿಯ ಋಣ ಹಾಗೂ ಹೊತ್ತ ನೆಲದ ಋಣ ತೀರಿಸಲಾಗದ ಸಂಪತ್ತಾಗಿದೆ. ಮಕ್ಕಳು ಸಂಸ್ಕಾರಯುತರಾಗಿ ಬೆಳೆದಾಗ ಸಮಾಜದಲ್ಲಿನ ಉನ್ನತ ಸ್ಥಾನಮಾನಗಳು ಹಾಗೂ ಗೌರವ ದೊರಕಿ ಬದುಕು ಪಾವನವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅವರವರ ತಂದೆ ತಾಯಿಯಂದಿರ ಪಾದ ಪೂಜೆ ಮಾಡಿಸಲಾಯಿತು.
ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಅವರು ಗೌರವ ಉಪಸ್ಥಿತಿಯಿಂದ ಮಾತನಾಡಿ – ಮಾತೃ ಸೇವೆ – ಪಿತೃ ಸೇವೆಯಿಂದ ಸಿಗುವ ಪುಣ್ಯ ಫಲವನ್ನು ಅಳೆಯುವುದಕ್ಕೆ ಯಾವ ಮಾನದಂಡವು ಇಲ್ಲ. ಪ್ರತಿ ವ್ಯಕ್ತಿಯು ಸಂಸ್ಕಾರ ಸಂಪನ್ನನಾಗಿ ನಮ್ಮ ಸಂಸ್ಕೃತಿಯನ್ನು ಮುಂದಿನ ದಿನಕ್ಕೆ ಕೊಂಡೊಯ್ಯಬೇಕು ಎಂದರು.
ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀ ಕೆ. ಸುಭಾಶ್ಚಂದ್ರಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈಅವರು ಸ್ವಾಗತಿಸಿ ಪ್ರಾಥಮಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀ ವೆಂಕಟ ಕೃಷ್ಣ ಅತಿಥಿಗಳನ್ನು ಪರಿಚಯಿಸಿದರು. ಡಾ. ಕೃಷ್ಣರಾಜ ಕರಬ ನಿರೂಪಿಸಿದರೆ, ಶ್ರೀಮತಿ ಪ್ರಿಯಾಂಕ ಪ್ರಾರ್ಥಿಸಿದರು. ಶ್ರೀಮತಿ ಸುಮಲತಾ ವಂದಿಸಿದರು.