ಶಿಕ್ಷಣ

ಕಾಲೇಜಿನಿಂದ ಮನೆಗೆ ಮರಳಿದ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ:ವಿದ್ಯಾರ್ಥಿ ಸಮುದಾಯ ಆಕ್ರೋಶ

Views: 58

ಕನ್ನಡ ಕರಾವಳಿ ಸುದ್ದಿ: ಕಾಲೇಜಿಗೆ ತೆರಳುವ ಮತ್ತು ಮನೆಗೆ ಮರಳುವ ವೇಳೆ ಯುವಕರ ಗುಂಪಿನಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದಳೆನ್ನಲಾದ ಪಂಜಾಬ್‌ನ ಫರೀದ್‌ಕೋಟ್‌ನ ಸರ್ಕಾರಿ ಬ್ರಿಜಿಂದ್ರಾ ಕಾಲೇಜಿನ ಬಿಎ ವಿದ್ಯಾರ್ಥಿನಿ ಅದಿತಿ ಮೃತಪಟ್ಟಿದ್ದು, ಈ ಘಟನೆ ವಿದ್ಯಾರ್ಥಿ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಮಂಗಳವಾರ ಕಾಲೇಜಿನಿಂದ ಮನೆಗೆ ಮರಳಿದ ಬಳಿಕ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆಯ ಖಂಡಿಸಿ ಪಂಜಾಬ್ ಸ್ಪೂಡೆಂಟ್ಸ್ ಯೂನಿಯನ್ (PSU) ಸದಸ್ಯರು ಪ್ರತಿಭಟನೆ ನಡೆಸಿ, ಫರೀದ್‌ಕೋಟ್‌ನ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿಗೆ ಕಿರುಕುಳ ನೀಡಿದವರನ್ನು ತಕ್ಷಣ ಬಂಧಿಸಬೇಕು ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಾಲಾ-ಕಾಲೇಜುಗಳ ಹೊರಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಘಟನೆಗಳು ಪದೇಪದೇ ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲವು ಯುವಕರು ಕಾಲೇಜಿನ ಗೋಡೆ ಹಾರಿ ಕ್ಯಾಂಪಸ್ ಪ್ರವೇಶಿಸಿ ವಿದ್ಯಾರ್ಥಿನಿಯರನ್ನು ಕಿರುಕುಳಕ್ಕೆ ಒಳಪಡಿಸುವುದು ಮತ್ತು ಅವರ ಮೊಬೈಲ್‌ ಸಂಖ್ಯೆಗಳನ್ನು ಪಡೆದು ತೊಂದರೆ ನೀಡುವುದು ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಇದೇ ರೀತಿಯ ಕಿರುಕುಳವನ್ನು ತಾವೂ ಹಿಂದೆ ಎದುರಿಸಿದ್ದಾಗಿ ವಿದ್ಯಾರ್ಥಿನಿಯೊಬ್ಬರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನೂ ಒದಗಿಸಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿದ ಕಾರಣಗಳು ಮತ್ತು ಕಿರುಕುಳದ ಆರೋಪಗಳ ಕುರಿತು ಪೊಲೀಸ್‌ ತನಿಖೆ ಮುಂದುವರಿದಿದ್ದು, ಆರೋಪಗಳು ಇನ್ನೂ ತನಿಖೆಯಲ್ಲಿವೆ.

Related Articles

Back to top button
error: Content is protected !!