ಇತರೆ

ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ಆರೋಪ: ಮೂವರು ಮಹಿಳಾ ಪತ್ರಕರ್ತೆಯರ ದೂರು

Views: 100

ಕನ್ನಡ ಕರಾವಳಿ ಸುದ್ದಿ: ಜಂತ‌ರ್ ಮಂತರ್ ನಲ್ಲಿ ಅಕ್ಟೋಬ‌ರ್ 3ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೂವರು ಮಹಿಳಾ ಪತ್ರಕರ್ತೆಯರು ನೀಡಿರುವ ದೂರುಗಳ ಕುರಿತು ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಮೂವರು ಮಹಿಳಾ ಪತ್ರಕರ್ತೆಯರು ಪೊಲೀಸರಿಗೆ ದೂರು ನೀಡಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಂತರ್ ಮಂತರ್ ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್‌ ಸಿಬ್ಬಂದಿಯ ವಿರುದ್ಧ ದೂರು ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ದೂರುಗಳನ್ನು ಜಿಲ್ಲಾ ಪೊಲೀಸರಿಂದ ಕ್ರೈಂ ಬ್ರಾಂಚ್ ಗೆ ವರ್ಗಾಯಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶನಿವಾರ ಸುಮಾರು 200 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರದ ಪ್ರತಿಭಟನೆಗೆ ಸಂಬಂಧಿಸಿದಂತೆ ಆದೇಶ ಉಲ್ಲಂಘನೆ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಹಲ್ಲೆ ನಡೆಸಿದ ಆರೋಪದಡಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಿಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಗುಂಪುಗಳ ಸದಸ್ಯರು ಸೇರಿದಂತೆ ಪ್ರತಿಭಟನಾಕಾರರು ಜಂತರ್ ಮಂತರ್ ನಲ್ಲಿ ಜಮಾಯಿಸಲು ಪ್ರಯತ್ನಿಸಿದ್ದರು.

ವಶಕ್ಕೆ ಪಡೆದವರಲ್ಲಿ AISA ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ನಾಗರಿಕ ಸಮಾಜದ ಕಾರ್ಯಕರ್ತ ಯೋಗೇಂದ್ರ ಯಾದವ್ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದ್ದಾರೆ.

Related Articles

Back to top button
error: Content is protected !!