ಮಂತ್ರಾಲಯಕ್ಕೆ ಹೊರಟಿದ್ದ ಕಾರು ಅಪಘಾತ ಚಿಕಿತ್ಸೆ ಫಲಿಸದೆ ಯುವಕ ಸಾವು
Views: 128
ಕನ್ನಡ ಕರಾವಳಿ ಸುದ್ದಿ: ಸ್ನೇಹಿತರೊಂದಿಗೆ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27) ಎಂದು ಗುರುತಿಸಲಾಗಿದೆ. ಶಿಶಿಲದಿಂದ ಸ್ನೇಹಿತರೊಂದಿಗೆ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಶಿಲದ ರಘು (32), ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀನ್, ಸತೀಶ, ದೀಪೇಶ್, ದೀಪಕ್ ಅಲಿಯಾಸ್ ತಿರುಮಲೇಶ್ವರ ಹಾಗೂ ಶೋಭಿತ್ ಅಲಿಯಾಸ್ ನಾಗರಾಜ್ ಎಂಬ ಆರು ಮಂದಿ ಸ್ನೇಹಿತರು ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಉಜಿರೆ–ಚಾರ್ಮಾಡಿ ಮಾರ್ಗವಾಗಿ ಬಣಕಲ್ ದಾಟಿ ಮೂಡಿಗೆರೆ ಕಡೆಗೆ ತೆರಳುತ್ತಿದ್ದಾಗ, ನಸುಕಿನ ಜಾವ ಸುಮಾರು 3.40ರ ವೇಳೆಗೆ ಸಬ್ಬೇನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಎದುರಿನಿಂದ ಬಂದ ಫೋರ್ಡ್ ಎಂಡೀವರ್ ಕಾರು ಇನೋವಾಗೆ ಡಿಕ್ಕಿ ಹೊಡೆದಿದೆ.
ಎಂಡೀವರ್ ಕಾರನ್ನು ಆಲ್ದೂರು ನಿವಾಸಿ ಸುಂದರೇಶ್ ಅವರ ಪುತ್ರ ಅಮೋಘ್ ಡಿ.ಎಸ್. ಚಾಲನೆ ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪಘಾತದಲ್ಲಿ ಇನೋವಾದಲ್ಲಿದ್ದ ಆರು ಮಂದಿಗೂ ಗಾಯಗಳಾಗಿದ್ದು, ದೀಪೇಶ್ ಅವರ ಕುತ್ತಿಗೆಗೆ ಹಾಗೂ ಸುಧೀನ್ ಅವರ ಎಡ ಭುಜಕ್ಕೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ಬಣಕಲ್‌ನ ಕೃಷ್ಣ ಆಸ್ಪತ್ರೆಗೆ ದಾಖಲಿಸಿ ಬಳಿಕ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸುಧೀನ್ ಅವರನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ದೀಪೇಶ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೀಪೇಶ್ ಮೃತಪಟ್ಟಿದ್ದಾರೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.






