ಯುವಜನ

ಕಾಲೇಜು ಮುಗಿಸಿ ಗೆಳತಿ ಸ್ಕೂಟರ್‌ನಲ್ಲಿ ಸಿಟಿಗೆ ತೆರಳುತ್ತಿದ್ದ ವೇಳೆ ಅಪಘಾತ: ಪಿಯುಸಿ ವಿದ್ಯಾರ್ಥಿನಿ ಸಾವು 

Views: 50

ಕನ್ನಡ ಕರಾವಳಿ ಸುದ್ದಿ: ಹಾಸನದ ವಿಶ್ವಕರ್ಮ ವೃತ್ತದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮತ್ತೋರ್ವ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

ಲಿಖಿತಾ (18) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿನಿ. ಚಿನ್ಮಯಿ ಎಂಬಾಕೆ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾಲೇಜು ಮುಗಿಸಿ ಮನೆಗೆ ಬಂದಿದ್ದ ಲಿಖಿತಾ ಬಳಿಕ ಗೆಳತಿ ಸ್ಕೂಟರ್‌ನಲ್ಲಿ ಸಿಟಿಗೆ ತೆರಳಿದ್ದರು. ಹಾಸನದ ಬಸ್‌ ನಿಲ್ದಾಣ ಕಡೆಯಿಂದ ಡೈರಿ ಕಡೆಗೆ ಸ್ಕೂಟರ್ ತಿರುಗಿಸಿದ್ದಾರೆ. ಈ ವೇಳೆ ಅತಿ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪಾನಮತ್ತನಾಗಿ ಲಾರಿ ಚಲಾಯಿಸಿದ್ದರಿಂದಲೇ ಅಪಘಾತ ಆಗಿದೆ ಎಂದು ಸ್ಥಳೀಯರು ಚಾಲಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Related Articles

Back to top button
error: Content is protected !!