ಪತಿ ತನ್ನೊಂದಿಗೆ ಸಮಯ ಕಳೆಯುತ್ತಿಲ್ಲ ಎಂಬ ಕಾರಣಕ್ಕೆ ಸಾವಿಗೆ ಶರಣಾದ ಸಾಫ್ಟ್‌ವೇರ್ ಉದ್ಯೋಗಿ
Views: 102
ಕನ್ನಡ ಕರಾವಳಿ ಸುದ್ದಿ: ಮದುವೆಯಾಗಿ ಕೇವಲ ಎರಡು ತಿಂಗಳಷ್ಟೇ ಕಳೆದಿದ್ದ ನವ ವಿವಾಹಿತೆಯೊಬ್ಬಳು ಪತಿ ತನ್ನೊಂದಿಗೆ ಸಮಯ ಕಳೆಯುತ್ತಿಲ್ಲ ಎಂಬ ಮನಸ್ತಾಪದಿಂದ ಸಾವಿಗೆ ಶರಣಾಗಿರುವ ದಾರುಣ ಘಟನೆ ಹೈದರಾಬಾದ್‌ನ ಮೂಸಾಫೇಟ್‌ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 25 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಚಂದನಾ ಜ್ಯೋತಿ ಎಂದು ಗುರುತಿಸಲಾಗಿದೆ. ಚಂದನಾ ಜ್ಯೋತಿ ಮನೆಯಿಂದಲೇ ‘ವರ್ಕ್ ಫ್ರಮ್ ಹೋಮ್’ ಮಾಡುತ್ತಿದ್ದರೆ, ಆಕೆಯ ಪತಿ ಪ್ರತಿದಿನ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದರು.
ಕುಟುಂಬ ನಿರ್ವಹಣೆ ಹಾಗೂ ಹಣಕಾಸಿನ ಅಗತ್ಯಗಳಿಗಾಗಿ ಪತಿ ಹಗಲಿರುಳು ದುಡಿಯುತ್ತಿದ್ದುದರಿಂದ, ಆಕೆಗೆ ಬೇಕಾದಷ್ಟು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ದಂಪತಿ ನಡುವೆ ಆಗಾಗ ಸಣ್ಣಪುಟ್ಟ ಮನಸ್ತಾಪಗಳು ಉಂಟಾಗುತ್ತಿದ್ದವು. ಪತಿ ತನಗೆ ಸಮಯ ಮೀಸಲಿಡುತ್ತಿಲ್ಲ ಎಂಬ ತೀವ್ರ ಕೊರಗಿನಲ್ಲಿದ್ದ ಚಂದನಾ ಜ್ಯೋತಿ, ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾಯಲು ಯತ್ನಿಸಿದ್ದಾರೆ.
ಘಟನೆಯನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ.
ಹಣ ಸಂಪಾದನೆ ಮತ್ತು ಕೆಲಸದ ಒತ್ತಡದ ನಡುವೆ ಸಂಬಂಧಗಳಿಗೆ ಸಮಯ ನೀಡಲಾಗದೆ ಉಂಟಾಗುತ್ತಿರುವ ಇಂತಹ ದುರಂತಗಳು ಸಮಾಜದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






