ಕುಮಾರಿ ಮುಗ್ಧ ಯು.ಶೆಟ್ಟಿ ಸ್ಮರಣಾರ್ಥ ಕಾಳಾವರ ಸರ್ಕಾರಿ ಪ್ರೌಢ ಶಾಲಾ ಆವರಣ ಗೋಡೆ ಉದ್ಘಾಟನೆ
ಶಾಲೆಯ ಸುರಕ್ಷತೆ ದೃಷ್ಟಿಯಿಂದ ತನ್ನ ಊರಿನಲ್ಲಿ ಮಗಳ ಹೆಸರು ಶಾಶ್ವತವಾಗಿ ನೆಲೆಯಾಗುವ ದೃಷ್ಟಿಯಿಂದ ಶಾಲೆಯಲ್ಲಿ ಮಗಳನ್ನು ನೆನಪಿಸುವಂತಹ ಶಾಲಾ ಆವರಣ ಗೋಡೆ ನಿರ್ಮಿಸಿ ಸಮರ್ಪಣೆ ಮಾಡಿದ ಅಪರೂಪದ ಕಾರ್ಯಕ್ರಮ
Views: 899
ಕನ್ನಡ ಕರಾವಳಿ ಸುದ್ದಿ: ಕಾಳಾವರ ನೇತಾಜಿ ಸುಭಾಶ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಮಾರಿ ಮುಗ್ಧ ಯು.ಶೆಟ್ಟಿ ಸ್ಮರಣಾರ್ಥ ಅವರ ತಂದೆ ಉದಯ ಕುಮಾರ್ ಶೆಟ್ಟಿ, ಅನಗಳ್ಳಿ ಮನೆ ಸಲ್ವಾಡಿ ಇವರು ಕೂಡ ಮಾಡಿದ ಶಾಲಾ ಆವರಣ ಗೋಡೆಯನ್ನು ಅಕ್ಟೋಬರ್ 2 ರಂದು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಅವರು ಮಾತನಾಡಿ, ಇದೊಂದು ಭಾವನಾತ್ಮಕ ಕಾರ್ಯಕ್ರಮವಾಗಿದ್ದು, ಸರ್ಕಾರಿ ಶಾಲೆಗಳ ಸುರಕ್ಷತೆ ಅವಶ್ಯಕತೆ ಇದ್ದು ಈ ಕಾರಣಕ್ಕಾಗಿ ಸಮಾಜ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಸುಸಜ್ಜಿತ ಶಾಲಾ ಆವರಣ ಗೋಡೆ ನಿರ್ಮಿಸಿಕೊಟ್ಟ ಆನಗಳ್ಳಿ ಮನೆ ಉದಯ್ ಕುಮಾರ್ ಶೆಟ್ಟಿ ಅವರ ಕುಟುಂಬವನ್ನು ಅಭಿನಂದಿಸಿದರು.
ಶಾಲಾ ಆವರಣ ಗೋಡೆಯ ನಾಮಫಲಕವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀ ರಾಘವೇಂದ್ರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಯಾಗಿದ್ದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಎಚ್. ಶೋಭಾ ಶೆಟ್ಟಿ ಮಾತನಾಡಿ, ಸರ್ಕಾರಿ ಜಾಗ ಮತ್ತು ಶಾಲೆಯ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಭದ್ರವಾದ ಶಾಲಾ ಆವರಣ ಗೋಡೆಯನ್ನು ನಿರ್ಮಿಸುವುದರ ಮೂಲಕ ಊರಿನ ಶಾಲೆಗೆ ನೀಡಿದ್ದೀರಿ.. ಈ ಮೂಲಕ ಶಾಲೆಗೆ ಶಾಶ್ವತ ಆಸ್ತಿಯನ್ನಾಗಿ ನೀಡಿದ್ದಕ್ಕಾಗಿ ಅಭಿನಂದಿಸಿದರು.
ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಸಲ್ವಾಡಿ ಮಾತನಾಡಿ, ಹೊಸ ರೀತಿಯ ಕಲ್ಪನೆಗಾರ, ಸ್ನೇಹಜೀವಿ, ಉತ್ತಮ ಸಂಘಟಕ, ಶಾಲೆಯ ಬಗ್ಗೆ ಅಪಾರ ಪ್ರೀತಿ ಮತ್ತು ಸಂಕಷ್ಟ ದಿನಗಳಲ್ಲಿ ಕೈಹಿಡಿದು ಮುನ್ನಡೆಸಿದ್ದಲ್ಲದೆ ತನ್ನೂರಿನಲ್ಲಿ ಹುಟ್ಟಿ ಬೆಳೆದ ಶಾಲೆಗೆ ಮಗಳ ಸವಿನೆನಪಿಗಾಗಿ ಹತ್ತು ಲಕ್ಷಕ್ಕೂ ಹೆಚ್ಚು ಶಾಲೆಗೆ ವಿನಿಯೋಗಿಸಿದ ಉದಯಕುಮಾರ್ ಶೆಟ್ಟಿ ಅವರು ಹೃದಯ ಶ್ರೀಮಂತಿಕೆ ಮೆರೆದು ಈ ಕೊಡುಗೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣ ಗೋಡೆಯ ಉಸ್ತುವಾರಿಯಾಗಿ ನಿರ್ವಹಿಸಿದ ಮಹೇಶ್ ಅವರಿಗೆ ಸನ್ಮಾನ ನೀಡಲಾಯಿತು.
ಅಧ್ಯಾಪಕ ರವಿರಾಜ್ ಶೆಟ್ಟಿ ಅವರು ಉದಯಕುಮಾರ್ ಶೆಟ್ಟಿ ಅವರ ಸೇವೆಯ ಕುರಿತಾಗಿ ಹಾಡಿದ ಆಡಿಯೋ ಬಿತ್ತರಿಸಲಾಯಿತು.
ವೇದಿಕೆಯಲ್ಲಿವಿಜಯ್ ಕುಮಾರ್ ಶೆಟ್ಟಿ ಕುಂದಾಪುರ ಅನಗಳ್ಳಿ ಮನೆ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಮುಸರತ್ ಜಹಾನ್ ಅಕ್ಟರ್ ಎಂ ಸ್ವಾಗತಿಸಿದರು. ಅಧ್ಯಾಪಕ ಗಣೇಶ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕಾಳಾವರ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಕ್ವಾಡಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.












