ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿ ಜೈಲು ಸೇರಿದ್ದ ಕೈದಿ ಪ್ರೇಮಿಗಳ ಮದುವೆಗೆ ಹೈಕೋರ್ಟ್ ಒಪ್ಪಿಗೆ
Views: 70
ಕನ್ನಡ ಕರಾವಳಿ ಸುದ್ದಿ: ಪತಿಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ ಹಾಗೂ ಆಕೆಯ ಪ್ರೇಮಿ ಪರಸ್ಪರ ಮದುವೆಯಾಗಲು ಹೈಕೋರ್ಟ್ ಒಂದು ದಿನದ ಸೀಮಿತ ಪೆರೋಲ್ ಮಂಜೂರು ಮಾಡಿದೆ. ‘ಶಾಸನಬದ್ಧ ನಿಷೇಧವಿಲ್ಲದಿರುವಾಗ ಕೇವಲ ನೈತಿಕತೆಯ ಆಧಾರದಲ್ಲಿ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಳಗಾವಿ ಕಾರಾಗೃಹದಲ್ಲಿರುವ ಶ್ರೀಧರ ಹಾಗೂ ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ಹೈಕೋರ್ಟ್‌ನ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಅರ್ಜಿದಾರರು ಈಗಾಗಲೇ 3 ವರ್ಷ, 5 ತಿಂಗಳು ಮತ್ತು 25 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಜೈಲಿನಲ್ಲಿ ಇವರ ನಡವಳಿಕೆ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯಗಳು ಇಲ್ಲ. ಅಂತೆಯೇ, ಮದುವೆಯನ್ನು ಜೈಲಿನ ಆವರಣದಲ್ಲೇ ನಡೆಸಲು ನಿಯಮಗಳ ಪ್ರಕಾರ ಅವಕಾಶವಿಲ್ಲ’ ಎಂದು ಪ್ರತಿಪಾದಿಸಿದರು.
ಅಂತಿಮವಾಗಿ ನ್ಯಾಯಪೀಠ, ‘ಅರ್ಜಿದಾರ ಕೈದಿಗಳು ಮದುವೆಯಾಗಲು ನಿಶ್ಚಯಿಸುವ ದಿನದಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಪೆರೋಲ್ ನೀಡಬೇಕು. ಮದುವೆ ಸಮಾರಂಭಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಇಬ್ಬರೂ ಅಂದು ಸಂಜೆಯೇ 5 ಗಂಟೆಯ ಒಳಗಾಗಿ ಬೆಳಗಾವಿ ಕಾರಾಗೃಹಕ್ಕೆ ಹಿಂದಿರುಗಬೇಕು. ಈ ನಿಟ್ಟಿನಲ್ಲಿ ಜೈಲು ಅಧಿಕಾರಿಗಳು ಆದೇಶದ ಪ್ರತಿ ಸಿಕ್ಕ ಒಂದು ವಾರದಲ್ಲಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಏನಿದು ಪ್ರಕರಣ: ಸಿದ್ದವ್ವ ಸಂಚು ರೂಪಿಸಿ ಶ್ರೀಧರ್ ಜೊತೆಗೂಡಿ ತನ್ನ ಪತಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆಯಾಗಿದ್ದು, ಪ್ರಸ್ತುತ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇಬ್ಬರೂ ಮದುವೆಯಾಗಲು ನಿರ್ಧರಿಸಿ 90 ದಿನಗಳ ಕಾಲ ಪೆರೋಲ್ ನೀಡಬೇಕು ಎಂದು ಕೋರಿದ್ದರು.






