ಕೊಲ್ಲೂರು ಜೋಡಿ ಆತ್ಮಹತ್ಯೆ ಪ್ರಕರಣ:ಕೊಳೆತ ಸ್ಥಿತಿಯಲ್ಲಿ ನೇತಾಡುತ್ತಿದ್ದ ಮೃತದೇಹದ ಅವಶೇಷಗಳನ್ನು ಪ್ಯಾಕ್ ಮಾಡಿ ಸರ್ಕಾರಿ ಆಸ್ಪತ್ರೆಗೆ ರವಾನೆ
Views: 80
ಕನ್ನಡ ಕರಾವಳಿ ಸುದ್ದಿ: ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ಪುರುಷ, ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲ್ಲೂರು ಪೊಲೀಸ್ ಠಾಣೆಯ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದ ಚಾರ್ಸಾಲು ಮೂಲದ ವಿಠಲ್ ನಾಯ್ಕ (36) ಹಾಗೂ ಹೊಸೂರು ಮೂಲದ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಮೃತರು.

ಅಕ್ರಮ ಸಂಬಂದ ಹೊಂದಿದ್ದರೆನ್ನಲಾದ ವಿಠಲ್ ನಾಯ್ಕ ಹಾಗೂ ಭವ್ಯಾ ಜೊತೆಗೆ ಸೇರಿ ಅನಾರೋಗ್ಯದಲ್ಲಿದ್ದ ವಿಠಲ್ ಪತ್ನಿಗೆ ಇಂಜೆಕ್ಷನ್‌ಗಳನ್ನು ನೀಡಿ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಇಬ್ಬರ ಮೇಲೆ ಕೊಲೆಯತ್ನ ಅಪರಾಧ ಪ್ರಕರಣ ದಾಖಲಾಗಿತ್ತು. ಭವ್ಯಾಳನ್ನು ವಿಠಲ್ ಅಕ್ರಮ ಸಂಬಂಧ ಹೊಂದಿದ್ದು ನರ್ಸ್ ಎಂದು ಪರಿಚಯಿಸಿ ಪತ್ನಿಗೆ ಇಂಜೆಕ್ಷನ್ ನೀಡಿದ್ದ ಎನ್ನಲಾಗಿದೆ. ಘಟನೆ ಬಳಿಕ ಇಬ್ಬರು ನಾಪತ್ತೆಯಾಗಿದ್ದರು. ಈ ಪ್ರಕರಣದಡಿ ಕೊಲ್ಲೂರು ಪೊಲೀಸರು ಇಬ್ಬರು ಆರೋಪಿಗಳ ಪತ್ತೆಗೆ ಕಾರ್ಯಾಚರಿಸಿದ್ದರು.

ಆರೋಪಿಗಳ ಮೃತದೇಹ ಬೈಂದೂರು ಠಾಣೆ ವ್ಯಾಪ್ತಿಯ ಗೋಳಿಹೊಳೆ ಪ್ರದೇಶದಲ್ಲಿ ಪತ್ತೆಯಾಗಿದ್ದು ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅವರು ಮರದ ಮೇಲೆ ನೇತಾಡುತ್ತಿದ್ದ ದೇಹದ ಅಳಿದುಳಿದ ಭಾಗಗಳನ್ನು ಇಳಿಸಲು ಹಾಗೂ ಕೆಳಗಡೆ ಬಿದ್ದಿದ್ದ ಇನ್ನಿತರ ಅವಶೇಷಗಳನ್ನು ವಿಂಗಡಿಸಿ ಅವುಗಳನ್ನು ಪ್ಯಾಕ್ ಮಾಡಿ ಬೈಂದೂರು ಸರಕಾರಿ ಆಸ್ಪತ್ರೆಯ ಶೀಥಲೀಕರಣ ಘಟಕಕ್ಕೆ ರವಾನಿಸಲು ಸಹಕರಿಸಿದರು. ಪೊಲೀಸರು ಸೋಕೋ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
ಮೃತದೇಹಗಳನ್ನು ಸ್ಥಳದಿಂದ ತೆರವುಗೊಳಿಸುವ ಕಾರ್ಯದಲ್ಲಿ ಟೀಮ್ ಎಂಎಚ್‌ಐ ಗಂಗೊಳ್ಳಿ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ವಿಲ್ಸನ್ ರೆಬೆರೋ ಸಹಕರಿಸಿದರು. ಮರದ ಮೇಲೆ ನೇತಾಡುತ್ತಿದ್ದ ಮೃತದೇಹದ ಭಾಗಗಳನ್ನು ಕೆಳಗಿಳಿಸುವುದು ಹಾಗೂ ಕೆಳಭಾಗದಲ್ಲಿ ಪತ್ತೆಯಾದ ಇತರ ಅವಶೇಷಗಳನ್ನು ವಿಂಗಡಿಸಿ ಪ್ಯಾಕ್ ಮಾಡಿ ಬೈಂದೂರು ಸರ್ಕಾರಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸುವ ಕಾರ್ಯದಲ್ಲಿ ತಂಡ ನೆರವಾಯಿತು.

ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ತನಿಖೆ ಮುಂದುವರಿಸಿದ್ದು, ಇಬ್ಬರ ಸಾವಿನ ನಿಖರ ಕಾರಣ, ಸಾವಿಗೆ ಮುನ್ನ ನಡೆದಿರುವ ಬೆಳವಣಿಗೆಗಳು ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಇತರ ಆಯಾಮಗಳ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.






