ಶಿಕ್ಷಣ

ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ವೇಳೆ ಸೆಲ್ಫೀ, ವಿಡಿಯೋ ಚಿತ್ರೀಕರಣ ನಿಷೇಧ: ಶಿಕ್ಷಣ ಇಲಾಖೆ ಸುತ್ತೋಲೆ

Views: 19

ಕನ್ನಡ ಕರಾವಳಿ ಸುದ್ದಿ: ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಕಾಲೇಜು ಶಿಕ್ಷಣ ಇಲಾಖೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ.

ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದಾಗ ಸಂಭವಿಸುವ ಅಪಘಾತಗಳನ್ನು ತಡೆಯಲು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಸೆಲ್ಫಿ ಹಾಗೂ ರೀಲ್ಸ್‌ ವಿಡಿಯೋಗಳನ್ನು ಚಿತ್ರೀಕರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಹೊಸ ಸುತ್ತೋಲೆಯ ಪ್ರಕಾರ ಇನ್ಮುಂದೆ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು ಸೆಲ್ಫೀ, ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ಪ್ರವಾಸದ ಸಂದರ್ಭದಲ್ಲಿ ಪ್ರವಾಸಿ ತಾಣಗಳು, ನದಿಗಳು, ಜಲಪಾತಗಳು ಹಾಗೂ ಎತ್ತರದ ಬೆಟ್ಟ-ಗುಡ್ಡಗಳ ಬಳಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಫೋಟೋ, ಸೆಲ್ಫಿ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್‌ಗಳನ್ನು ಮಾಡುವಾಗ ಮೈಮರೆತು ಅಪಾಯಕ್ಕೆ ಸಿಲುಕುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಾಣರಕ್ಷಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಇಲಾಖೆಯು ಈ ನಿರ್ಣಾಯಕ ಆದೇಶ ಹೊರಡಿಸಿದೆ.

ಪ್ರವಾಸ ಆರಂಭವಾಗುವ ಮುನ್ನವೇ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಈ ನಿಯಮದ ಕುರಿತು ಸ್ಪಷ್ಟ ಸೂಚನೆ ನೀಡಬೇಕು ಮತ್ತು ನಿಯಮ ಉಲ್ಲಂಘನೆಯಾಗದಂತೆ ಜೊತೆಯಲ್ಲಿ ತೆರಳುವ ಉಪನ್ಯಾಸಕರು ತೀವ್ರ ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು ಪ್ರವಾಸಕ್ಕೆ ಶಿಕ್ಷಣ ಇಲಾಖೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಸೂಕ್ತ ಮುಚ್ಚಳಿಕೆ ಪತ್ರ ಮತ್ತು ಅವರ ಪೋಷಕರ ಲಿಖಿತ ಸಮ್ಮತಿ ಪತ್ರವನ್ನು ಪಡೆಯುವುದು ಕಡ್ಡಾಯವಾಗಿದೆ. ಪ್ರವಾಸಕ್ಕೆ ತೆರಳುವ ಮಾರ್ಗ ಹಾಗೂ ಭೇಟಿ ನೀಡುವ ಸ್ಥಳಗಳ ಮಾಹಿತಿಯನ್ನು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿಯೇ ಒದಗಿಸಬೇಕಾಗುತ್ತದೆ.

ಅತಿಥಿ ಉಪನ್ಯಾಸಕರನ್ನು ಮಾತ್ರವೇ ನಂಬಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಕನಿಷ್ಠ ಒಬ್ಬರು ಖಾಯಂ ಅಧ್ಯಾಪಕರು ತಂಡದಲ್ಲಿ ಇರುವುದು ಕಡ್ಡಾಯ. ಪ್ರವಾಸದಲ್ಲಿ ನಿಯೋಜನೆಗೊಳ್ಳುವ ಬೋಧಕ ಸಿಬ್ಬಂದಿಯ ಸಂಖ್ಯೆ ನಾಲ್ಕನ್ನು ಮೀರಬಾರದು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಇಬ್ಬರು ಮಹಿಳಾ ಅಧ್ಯಾಪಕಿಯರು ಇರಲೇಬೇಕು. ಅನುಮೋದಿತ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಬಾರದೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

Related Articles

Back to top button
error: Content is protected !!