ಆರ್ಥಿಕ

ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಿಂಗಳಿಗೆ 1.20 ಲಕ್ಷವರೆಗೆ ವೇತನ..SO ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಿ

Views: 43

ಕನ್ನಡ ಕರಾವಳಿ ಸುದ್ದಿ: ಬ್ಯಾಂಕ್ ಆಫ್ ಇಂಡಿಯಾ (BOI) 2026ನೇ ಸಾಲಿನ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 205 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಡಿ ಸ್ಕೇಲ್ I, ಸ್ಕೇಲ್ II, ಸ್ಕೇಲ್ III ಮತ್ತು ಸ್ಕೇಲ್ IV ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ತಂತ್ರಜ್ಞಾನ, ಭದ್ರತೆ, ಎಂಜಿನಿಯರಿಂಗ್ ಮತ್ತು ಕಾನೂನು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಸೆಪ್ಟೆಂಬರ್ 10ರಿಂದ ಅರ್ಜಿ ಆರಂಭ

ಬ್ಯಾಂಕ್ ಆಫ್ ಇಂಡಿಯಾ SO ನೇಮಕಾತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 10, 2026ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ. ಇದೇ ದಿನ ಅರ್ಜಿ ಶುಲ್ಕ ಪಾವತಿಗೂ ಅಂತಿಮ ಗಡುವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಅಧಿಸೂಚನೆಯನ್ನ ಸಂಪೂರ್ಣವಾಗಿ ಓದಿ, ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಅನುಭವದ ಮಾನದಂಡಗಳನ್ನು ಪರಿಶೀಲಿಸಬೇಕು.

ವಿವಿಧ ಹುದ್ದೆಗಳಿಗೆ ಆಕರ್ಷಕ ವೇತನ

ಬ್ಯಾಂಕ್ ಆಫ್ ಇಂಡಿಯಾ SO ನೇಮಕಾತಿಯಲ್ಲಿ ಹುದ್ದೆಯ ಸ್ಕೇಲ್‌ಗೆ ಅನುಗುಣವಾಗಿ ವೇತನ ನಿಗದಿಪಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉತ್ತಮ ವೇತನದ ಜೊತೆಗೆ ಬ್ಯಾಂಕ್ ನಿಯಮಗಳ ಪ್ರಕಾರ ವಿವಿಧ ಭತ್ಯೆಗಳು ಲಭ್ಯವಾಗಲಿವೆ.

* JMG Scale I: ₹48,480ರಿಂದ ₹85,920ರವರೆಗೆ

* MMGS Scale II: ₹64,820ರಿಂದ ₹93,960ರವರೆಗೆ

* MMGS Scale III: ₹85,920ರಿಂದ ₹1,05,280ರವರೆಗೆ

* SMGS Scale IV: ₹1,02,300ರಿಂದ ₹1,20,940ರವರೆಗೆ

ಅಂದರೆ ಅರ್ಹತೆ ಮತ್ತು ಹುದ್ದೆಯ ಆಧಾರದ ಮೇಲೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹1.20 ಲಕ್ಷದವರೆಗೆ ವೇತನ ಪಡೆಯುವ ಅವಕಾಶವಿದೆ.

 ಆಯ್ಕೆ ಪ್ರಕ್ರಿಯೆ?

ಬ್ಯಾಂಕ್ ಆಫ್ ಇಂಡಿಯಾ SO ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಹಂತ ಹಂತವಾಗಿ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತವಾದ ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆ ಮತ್ತು ಸಂದರ್ಶನ ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆ ಸಾಧಿಸುವ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಕರೆ ಪತ್ರ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ

ಬ್ಯಾಂಕ್ ಆಫ್ ಇಂಡಿಯಾ SO ನೇಮಕಾತಿಯಲ್ಲಿ ವಿವಿಧ ವಿಭಾಗಗಳ ಹುದ್ದೆಗಳು ಇರುವುದರಿಂದ ಪ್ರತಿಯೊಂದು ಹುದ್ದೆಗೂ ಶೈಕ್ಷಣಿಕ ಅರ್ಹತೆ ಒಂದೇ ಆಗಿರುವುದಿಲ್ಲ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನ ಪರಿಶೀಲಿಸುವುದು ಮುಖ್ಯವಾಗಿದೆ. ಕೆಲವು ಹುದ್ದೆಗಳಿಗೆ ನಿರ್ದಿಷ್ಟ ಶಿಕ್ಷಣದ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಅನುಭವವನ್ನೂ ಕೇಳಲಾಗಿದೆ. ವಿವಿಧ ಹುದ್ದೆಗಳಿಗೆ BE, BTech, MCA, MSc, ಸೈಬರ್ ಸೆಕ್ಯುರಿಟಿ ಸಂಬಂಧಿತ ಅರ್ಹತೆ, ಕಾನೂನು ಪದವಿ, ಸಿವಿಲ್ ಎಂಜಿನಿಯರಿಂಗ್ ಹಾಗೂ ಫೈರ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನ ಪರಿಗಣಿಸಲಾಗುತ್ತಿದೆ. ವಯೋಮಿತಿಯೂ ಹುದ್ದೆ ಮತ್ತು ಸ್ಕೇಲ್‌ಗೆ ಅನುಗುಣವಾಗಿ ಬದಲಾಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನ ಪರಿಶೀಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

SO ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನ ಸಿದ್ಧವಾಗಿಟ್ಟುಕೊಳ್ಳಬೇಕು. ಅರ್ಜಿ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಇತ್ತೀಚಿನ ಫೋಟೋ, ಸಹಿ, ಎಡಗೈ ಹೆಬ್ಬೆರಳಿನ ಗುರುತು, ಕೈಬರಹದ ಘೋಷಣೆ ಮತ್ತು ಮಾನ್ಯ ಫೋಟೋ ಐಡಿ ಸೇರಿದಂತೆ ಅಗತ್ಯ ದಾಖಲೆಗಳನ್ನ ಸಲ್ಲಿಸಬೇಕಾಗುತ್ತದೆ. ಅನುಭವ ಅಗತ್ಯವಿರುವ ಹುದ್ದೆಗಳಿಗೆ ಅನುಭವ ಪ್ರಮಾಣಪತ್ರ ಹಾಗೂ ಸಂಬಂಧಿತ ವೃತ್ತಿಪರ ಹುದ್ದೆಗಳಿಗೆ ವೃತ್ತಿಪರ ಪ್ರಮಾಣಪತ್ರಗಳನ್ನ ಕೂಡ ಸಲ್ಲಿಸಬೇಕಾಗುತ್ತದೆ.

ಬ್ಯಾಂಕ್ ಆಫ್ ಇಂಡಿಯಾ SO ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕವನ್ನ ಪಾವತಿಸಬೇಕು.

* ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ: ₹1,180

* SC, ST ಮತ್ತು PwBD ಅಭ್ಯರ್ಥಿಗಳಿಗೆ: ₹175

ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿ ಪ್ರಕ್ರಿಯೆಯನ್ನ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಅರ್ಜಿ ಮತ್ತು ಶುಲ್ಕ ಪಾವತಿಗೆ ಸೆಪ್ಟೆಂಬರ್ 25, 2026 ಅಂತಿಮ ದಿನವಾಗಿದೆ.

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ಪಡೆಯಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಅರ್ಜಿ ಸಲ್ಲಿಸುವುದು ಉತ್ತಮ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಹುದ್ದೆವಾರು ಶೈಕ್ಷಣಿಕ ಅರ್ಹತೆ, ವಯೋಮಿತಿ, ಅನುಭವ, ದಾಖಲೆಗಳು, ಪರೀಕ್ಷಾ ವಿಧಾನ ಮತ್ತು ಇತರ ನಿಯಮಗಳನ್ನ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಒಟ್ನಲ್ಲಿ ಬ್ಯಾಂಕ್ ಆಫ್ ಇಂಡಿಯಾದ 205 SO ಹುದ್ದೆಗಳ ನೇಮಕಾತಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿಶೇಷವಾಗಿ ತಂತ್ರಜ್ಞಾನ, ಭದ್ರತೆ, ಎಂಜಿನಿಯರಿಂಗ್ ಮತ್ತು ಕಾನೂನು ಕ್ಷೇತ್ರದ ಅರ್ಹ ಅಭ್ಯರ್ಥಿಗಳು ಈ ನೇಮಕಾತಿಯ ಲಾಭ ಪಡೆಯಬಹುದು.

Related Articles

Back to top button
error: Content is protected !!