ಅಕ್ಕ-ತಂಗಿ ನಡುವೆ ಜಗಳ: ಮನನೊಂದು ತಂಗಿ ಆತ್ಮಹತ್ಯೆ
Views: 23
ಕನ್ನಡ ಕರಾವಳಿ ಸುದ್ದಿ: ಕ್ಷುಲ್ಲಕ ವಿಚಾರಕ್ಕೆ ಅಕ್ಕ-ತಂಗಿ ನಡುವೆ ನಡೆದ ಗಲಾಟೆ ದುರಂತದಲ್ಲಿ ಅಂತ್ಯಗೊಂಡಿರುವ ಘಟನೆ ತುಮಕೂರು ನಗರದ ಜಯನಗರದ 5ನೇ ಕ್ರಾಸ್‌ನಲ್ಲಿ ನಡೆದಿದೆ.ಗಲಾಟೆಯಿಂದ ಮನನೊಂದ 16 ವರ್ಷದ ಬಾಲಕಿ ಹುಲಿಗಮ್ಮ ಆಹತ್ಯೆಮಾಡಿಕೊಂಡಿದ್ದಾರೆ.
ಮೃತ ಹುಲಿಗಮ್ಮ ರಾಯಚೂರು ಮೂಲದ ದೇವರಾಜು ಅವರ ಎರಡನೇ ಪುತ್ರಿಯಾಗಿದ್ದು, ತುಮಕೂರು ನಗರದ ಉಮಾಪ್ರಗತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ದೇವರಾಜು ಅವರು ತುಮಕೂರು ನಗರದಲ್ಲಿ ಗೂಡ್ಸ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಮನೆಯಲ್ಲಿ ಅಕ್ಕ-ತಂಗಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮೇಲ್ನೋಟಕ್ಕೆ ಮನೆಯಲ್ಲಿ ಸಾಂಬಾರ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಗಲಾಟೆಯಿಂದ ಮನನೊಂದ ಹುಲಿಗಮ್ಮ ಮನೆ ಬಳಿಯಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿದು ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.






