ಕಲ್ಲಡ್ಕ ಪ್ರಭಾಕರ ಭಟ್ ಸೌಜನ್ಯ ಮನೆಗೆ ದಿಢೀರ್ ಭೇಟಿ ನೀಡಿ ಮಹತ್ವದ ಮಾತುಕತೆ, ತೀವ್ರ ಕುತೂಹಲ!
Views: 76
ಕನ್ನಡ ಕರಾವಳಿ ಸುದ್ದಿ: 13 ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಕೊಲೆಗೀಡಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಧರ್ಮಸ್ಥಳದ ಪಾಂಗಾಳದಲ್ಲಿರುವ ಸೌಜನ್ಯಾ ತಾಯಿ ಕುಸುಮಾವತಿ ಅವರ ಮನೆಗೆ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಬುಧವಾರ ದಿಢೀರ್ ಭೇಟಿ ನೀಡಿದ್ದು ಪ್ರಕರಣದ ಆಗುಹೋಗುಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸೌಜನ್ಯಾ ಅವರ ತಾಯಿ ಕುಸುಮಾವತಿ ಮತ್ತು ಕುಟುಂಬಸ್ಥರನ್ನು ಭೇಟಿಯಾದ ಪ್ರಭಾಕರ ಭಟ್, ಕುಟುಂಬದೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕುಟುಂಬ ನಡೆಸುತ್ತಿರುವ ಸುದೀರ್ಘ ಹೋರಾಟದ ಕುರಿತು ಮಾತುಕತೆ ನಡೆದಿರುವ ಸಾಧ್ಯತೆ ಇದೆ.
ಭೇಟಿಯ ವೇಳೆ ಉದ್ಯಮಿ ಸದಾನಂದ ನಾವರ, ಪುರಂದರ, ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಸಹೋದರ ಮೋಹನ್ ಶೆಟ್ಟಿ ಉಜಿರೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. 13 ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಸೌಜನ್ಯ ಕುಟುಂಬದ ಹೋರಾಟದ ನಡುವೆ ಪ್ರಭಾಕರ ಭಟ್ ಅವರ ಭೇಟಿ ಹೊಸ ಕುತೂಹಲಕ್ಕೆ ಕಾರಣವಾಗಿದೆ






