ವಿದ್ಯಾರ್ಥಿನಿಯರೊಂದಿಗೆ ಡ್ಯಾಂನಲ್ಲಿ ಸ್ನಾನ: ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಾಂಶುಪಾಲ ಅಮಾನತು
ವಿದ್ಯಾರ್ಥಿನಿಯರಿಗೆ ಈಜು ಕಲಿಸುವ ನೆಪದಲ್ಲಿ ಅವರನ್ನು ನೀರಿನಲ್ಲಿ ಎತ್ತಿಕೊಂಡು ಈಜು ಕಲಿಸಲು ಪ್ರಯತ್ನಿಸಿದ್ದರು ಎಂಬ ಆರೋಪ
Views: 0
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿನಿಯರೊಂದಿಗೆ ಡ್ಯಾಂನಲ್ಲಿ ಸ್ನಾನ ಮಾಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಲಾಗಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಥಾನಾಗಾಜಿ ಪ್ರದೇಶದ ರೌಬಾವಿ ಪಡಕ್ ಛಾಪ್ಲಿ ಸರ್ಕಾರಿ ಹಿರಿಯ ಪ್ರೌಢಶಾಲೆಯ ಪ್ರಾಂಶುಪಾಲ ಲಾಲ್ ಚಂದ್ ಮೀನಾ ಅವರು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಡ್ಯಾಂಗೆ ಕರೆದೊಯ್ದಿದ್ದರು ಎಂದು ವರದಿಯಾಗಿದೆ.
ಈ ಡ್ಯಾಂನಲ್ಲಿ ಸುಮಾರು 11 ಅಡಿ ಆಳದ ನೀರಿದ್ದು, ಮುಳುಗುವ ಅಪಾಯದ ಹಿನ್ನೆಲೆಯಲ್ಲಿ ಅಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೂ ವಿದ್ಯಾರ್ಥಿಗಳನ್ನು ನೀರಿಗೆ ಇಳಿಯಲು ಅವಕಾಶ ನೀಡಲಾಗಿದ್ದು, ಪ್ರಾಂಶುಪಾಲರೂ ವಿದ್ಯಾರ್ಥಿನಿಯರೊಂದಿಗೆ ನೀರಿನಲ್ಲಿ ಇಳಿದು ಸ್ನಾನ ಮಾಡಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ.
ವಿದ್ಯಾರ್ಥಿನಿಯರಿಗೆ ಈಜು ಕಲಿಸುವ ನೆಪದಲ್ಲಿ ಅವರನ್ನು ನೀರಿನಲ್ಲಿ ಎತ್ತಿಕೊಂಡು ಈಜು ಕಲಿಸಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ವೇಳೆ ಯಾವುದೇ ಸುರಕ್ಷತಾ ವ್ಯವಸ್ಥೆ, ಲೈಫ್ ಜಾಕೆಟ್ ಅಥವಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜಸ್ಥಾನದ ಶಿಕ್ಷಣ ಇಲಾಖೆ ಪ್ರಾಂಶುಪಾಲ ಲಾಲ್ ಚಂದ್ ಮೀನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅಮಾನತು ಅವಧಿಯಲ್ಲಿ ಅವರ ಕೇಂದ್ರ ಕಚೇರಿಯನ್ನು ಬಿಕಾನೇರ್‌ನ ಪ್ರೌಢ ಶಿಕ್ಷಣ ನಿರ್ದೇಶನಾಲಯದಲ್ಲಿ ನಿಗದಿಪಡಿಸಲಾಗಿದೆ.
ಅಲ್ಲದೆ, ಸರ್ಕಾರಿ ನೌಕರರ ನಡವಳಿಕೆ ನಿಯಮ ಉಲ್ಲಂಘನೆಯ ಆರೋಪದಡಿ ಇಲಾಖಾ ತನಿಖೆಯನ್ನೂ ಆರಂಭಿಸಲಾಗಿದೆ. ಘಟನೆಯ ಸಂಪೂರ್ಣ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಪ್ರಾಂಶುಪಾಲರ ವರ್ತನೆ ಕುರಿತು ತನಿಖೆಯ ಬಳಿಕ ಹೆಚ್ಚಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.






