ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಗೋಪಾಲ ಕಾಳಾವರ ನಿಧನ
Views: 623
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರದ ರಂಗ ಕಲಾವಿದ ಗೋಪಾಲ ಕಾಳಾವರ( 60) ಅಗಸ್ಟ್ 15 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.
ಇವರು ಕಾಳಾವರದ ಕನಕದಾಸ ಯುವಕ ಮಂಡಲದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿದ್ದು, ಗೀಗಿ ಪದ, ಲಾವಣಿ, ಭಜನೆ, ವೀರಗಾಸೆ, ಜಾನಪದ ಗೀತೆ, ಡೋಲುವಾದನ ಇನ್ನಿತರ ಚಟುವಟಿಕೆಗಳಲ್ಲಿ ರಾಷ್ಟ್ರ ಮಟ್ಟದವರೆಗೆ ಗುರುತಿಸಿಕೊಂಡು ಹಲವಾರು ಬಹುಮಾನಗಳಿಸಿದ್ದರು.
ಸಾಹಿತಿ ಕೆ.ಕೆ.ಕಾಳಾವರ್ಕರ್ ಅವರ ಹೆಸರಾಂತ ‘ಕಾಲ’ ನಾಟಕದಲ್ಲಿ ‘ಪಾತ್ರಿ’ ಪಾತ್ರದಲ್ಲಿ 100 ಕ್ಕೂ ಹೆಚ್ಚು ಪ್ರದರ್ಶನದಲ್ಲಿ ಅಭಿನಯಿಸಿದ್ದು, ರಾಜ್ಯಮಟ್ಟದವರೆಗೂ ಉತ್ತಮ ನಟ ಪ್ರಶಸ್ತಿಯನ್ನು ಹಲವಾರು ಬಾರಿ ಪಡೆದಿದ್ದರು. ಯುವಜನ ಮೇಳದಲ್ಲಿಯೂ ರಾಷ್ಟ್ರ ಮಟ್ಟದವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
ಇದಲ್ಲದೆ ಹಲವಾರು ನಾಟಕದಲ್ಲಿ ಅಭಿನಯಿಸಿದ್ದು ಉತ್ತಮ ರಂಗ ಕಲಾವಿದರಾಗಿದ್ದಾರೆ. ಮೂಕನ ಮದುವೆ ಊರುಗೋಲು, ಸತೀಶ್ ಚಂದ್ರ ಕಾಳಾವರ್ಕರ್ ಅವರ ‘ಶಂಕೆ’ ನಾಟಕದಲ್ಲಿ ನಟಿಸಿ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉತ್ತಮ ಹಾಡುಗಾರರು. ಉತ್ತಮ ಕೃಷಿಕ, ಪ್ರಸ್ತುತ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಜನ್ನಾಡಿಯಲ್ಲಿ ವಾಸವಾಗಿರುವ ಇವರು ಅಗಸ್ಟ್ 15 ರಂದು ಸಂಜೆ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಗೋಪಾಲ್ ಮೃತರಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಅವರ ಮನೆಗೆ ತೆರಳಿ ಅಂತಿಮನಮನ ಸಲ್ಲಿಸಿದ್ದಾರೆ.






