ಕುಂದಾಪುರದ ಆಸಾಡಿ ಹಬ್ಬ ಆಚರಣೆಯಲ್ಲಿ “ಕ್ಯಾನೆ ಮುದ್ದೆ” ವಿಶೇಷವೇನು?
Views: 0
ಕನ್ನಡ ಕರಾವಳಿ ಸುದ್ದಿ: ಸೂರ್ಯ ದೇವರು ಆಷಾಢ ಮಾಸದಲ್ಲಿ ಉತ್ತರದಿಂದ ದಕ್ಷಿಣಕ್ಕೆ ತನ್ನ ದಿಕ್ಕನ್ನು ಬದಲಾಯಿಸುತ್ತಾನೆ. ಮುಂದಿನ ಆರು ತಿಂಗಳುಗಳು ಸಾಂಕೇತಿಕವಾಗಿ ದೇವತೆಗಳ ರಾತ್ರಿಯ ಸಮಯ (ದಕ್ಷಿಣಾಯನ ಪುಣ್ಯಕಾಲ). ಆದ್ದರಿಂದ ಈ ತಿಂಗಳಲ್ಲಿ ಮದುವೆ ಮತ್ತು ಗೃಹಪ್ರವೇಶದಂತಹ ಶುಭ ಕಾರ್ಯಕ್ರಮಗಳನ್ನು ನಡೆಸಲಾಗುವುದಿಲ್ಲ. ಅಪೇಕ್ಷಿತ ಫಲಿತಾಂಶಗಳನ್ನು ನೀಡುವಲ್ಲಿ ವಿಫಲರಾಗುವ ಭಯದಿಂದ ಹೊಸ ಉದ್ಯಮಗಳನ್ನು ಪ್ರಾರಂಭಿಸುವುದಿಲ್ಲ.
ಶೂನ್ಯ ಮಾಸ ನಮ್ಮ ಹಿಂದೂ ಧರ್ಮದ ಪಂಚಾಂಗದ ಪ್ರಕಾರ 12 ಚಾಂದ್ರಮಾನ ಮಾಸಗಳಲ್ಲಿ ಒಂದಾದ ಮಾಸ ಆಷಾಢ. ಚೈತ್ರ ಕಾಲದಿಂದ ಹೊಸ ವರುಷದ ಆರಂಭವಾದ ಮೇಲೆ ಬರುವ ನಾಲ್ಕನೇ ಮಾಸವೇ ಈ ಆಷಾಢ ಮಾಸ. ಇದನ್ನು ಆಂಗ್ಲ ಕ್ಯಾಲೆಂಡರ್‌ನಲ್ಲಿ ಜೂನ್ ಅಥವಾ ಜುಲೈಯಲ್ಲಿ ಬರೆತಕ್ಕದ್ದು ಮತ್ತು ವರ್ಷ ಋತವೆ ಮುಗಿದು ಶರದೃತು ಶುರುವಾಗುವಂತ ಸಮಯ.
ಆಷಾಢ ಮಾಸವು ಹಿಂದೂ ಕ್ಯಾಲೆಂಡರ್‌ನಲ್ಲಿ ಕೇವಲ ಒಂದು ತಿಂಗಳು ಮಾತ್ರವಲ್ಲ, ಆಳವಾದ ಅಧ್ಯಾತ್ಮಿಕ ಮಹತ್ವ ಮತ್ತು ಸಾಂಸ್ಕ ತಿಕ ಶ್ರೀಮಂತಿಕೆಯನ್ನು ಸಹ ಹೊಂದಿದೆ. ಇವು ನಂಬಿಕೆ, ಭಕ್ತಿ ಮತ್ತು ಪ್ರಕೃತಿಯ ಉದಾರತೆಯ ರೋಮಾಂಚಕ ವರ್ಣಿಗಳಿಂದ ಹೆಣೆದ ವಸ್ತ್ರದಲ್ಲಿ ಭೂತ ಮತ್ತು ವರ್ತಮಾನವನ್ನು ಸಂಪರ್ಕಿಸುತ್ತವೆ.
ಕುಂದಾಪುರದ ಆಸಾಡಿ ಹಬ್ಬದ ವಿಶೇಷ
ಕಾರ್ ತಿಂಗಳ ನೆಟ್ಟಿಯೆಲ್ಲಾ ಮುಗಿಯಿತು. ಮಳೆಗಾಲ. ಜಿಟಿಜಿಟಿ ಮಳೆಯಲ್ಲಿ ಹೊರಗೆ ಹೋಗುವುದೇ ಕಷ್ಟ. ಮಾಡುವುದಕ್ಕೆ ಕೆಲಸವೂ ಇಲ್ಲ. ಮನೆಯೊಳಗೇ ಕುಳಿತು ಕುಳಿತು ಬೇಜಾರು. ಏನಾದರೂ ತಿನ್ನುತ್ತಿರಬೇಕು ಎನ್ನುವ ಹಪಹಪಿ ಬೇರೆ.
ಕಾರ್ ತಿಂಗಳು ಮುಗಿದು ಆಸಾಡಿ ತಿಂಗಳು ಬಂದಿದೆ. ಕರ್ಕಾಟಕ ಸಂಕ್ರಾಂತಿಯಿಂದ ಹಿಡಿದು ಸಿಂಹ ಸಂಕ್ರಾಂತಿಯವರೆಗೂ ನಮಗೆ ಅಸಾಡಿ ತಿಂಗಳು. ಆಸಾಡಿಯಲ್ಲಿ ಶುಭಕಾರ್ಯಗಳನ್ನು ಮಾಡುವ ಹಾಗಿಲ್ಲ. ದೇವರು ದಿಂಡರು, ಹಬ್ಬ ಹುಣ್ಣಿಮೆ ಯಾವುದೂ ಇಲ್ಲ. ಹಾಗಾಗಿ ಊಟದ ಕಾರ್ಯಕ್ರಮಗಳೂ ಇಲ್ಲ. ಏನಿದ್ದರೂ ಬರುವ ಸೋಣೆ ತಿಂಗಳ ವರೆಗೆ ಕಾಯಬೇಕು.
ನಮ್ಮ ಕುಂದಾಪುರದ ಕಡೆಯಲ್ಲಿ ಒಂದು ಕಥೆ ಇದೆ. ಒಬ್ಬರು ಒಡೆಯರ ಮನೆಯ ಕೆಲಸದ ಆಳು ನೆಟ್ಟಿ ಕೆಲಸ ಎಲ್ಲಾ ಆದ ಮೇಲೆ ಆಸಾಡಿ ತಿಂಗಳ ಜಿಟಿಪಿಟಿ ಮಳೆಯಲ್ಲಿ, ಮನೆಯ ಚಾವಡಿ ಮೂಲೆಯಲ್ಲಿ ಒಬ್ಬನೇ ಕುಳಿತುಕೊಂಡು ಗೊಣಗೊಣ ಎನ್ನುತ್ತಿದ್ದನಂತೆ “ಈಗ ನಮ್ಮ ದೊಡ್ಡ ಒಡ್ಯರಾರೂ ಪ್ಯಾಂಕ್ ಅಂದೀರೆ ಒಂದ್ ಒಳ್ಳೇ ಊಟ ಕಮ್ಸಿ ಉಂಬುಕಾರೂ ಸಿಕ್ಕಿತ್ತ.’ ಇದನ್ನು ಕೇಳಿಸಿಕೊಂಡ ದೊಡ್ಡ ಒಡತಿ “ನಮ್ಮ ಯಜಮಾನ್ರು ಸಾವುದ್ ಬೇಡ ಮಾರಾಯ. ನಿಂಗ್ ಬೇಕಾದ್ ಊಟ ಅಲ್ವಾ? ನಿಂಗ್ ಇವತ್ತೇ ಹಬ್ ಊಟ ನಾನೇ ಮಾಡಿ ಹಾಕ್ತೆ” ಎಂದು ಹೇಳಿ, ಅದೇ ದಿನ ಮನೆಯಲ್ಲಿ ಹಬ್ಬದ ಅಡಿಗೆ ಮಾಡಿ ಎಲ್ಲರಿಗೂ ಹೊಟ್ಟೆ ತುಂಬಾ ಬಡಿಸಿದರಂತೆ. ಹೀಗೆ ಆಸಾಡಿ ಹಬ್ಬದ ಪ್ರಾರಂಭ ಆಗಿದ್ದು ಎಂದು ಹೇಳುತ್ತಾರೆ.
ಕೋಳಿ ತಿನ್ನುವವರು ಅಸಾಡಿ ತಿಂಗಳಲ್ಲಿ ಒಂದು ದಿನ ಇಡ್ಲಿಕೋಳಿ ಮಾಡಿ ಹಬ್ಬ ಗಮ್ಮತ್ತು ಮಾಡುವ ಸಂಪ್ರದಾಯ ಇದೆ. ಅಸಾಡಿ ತಿಂಗಳಲ್ಲಿ ಒಂದು ದಿನ ಹಾಡಿ ಗುಡ್ಡೆಯಲ್ಲಿ ಸಿಗುವ ಕ್ಯಾನೆ ಗಡ್ಡೆ ಹುಡುಕಿ ತಂದು ಕ್ಯಾನೆ ಮುದ್ದೆ ಮಾಡಿ, ಅಕ್ಕಿ ಮುಡಿ ಮೇಲೆ ಇಟ್ಟು ಪೂಜೆ ಮಾಡುವ ರಿವಾಜೂ ಇದೆ.






