ಕುಂದಾಪುರದಲ್ಲಿ ಬೆಳ್ಳಂಬೆಳಿಗ್ಗೆ ಶೂಟೌಟ್ ಪ್ರಕರಣ: ಆರೋಪಿಯಿಂದ ಈ ಕಾರಣಕ್ಕಾಗಿ ಭೀಕರ ಹತ್ಯೆ
Views: 1276
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ಹಣಕಾಸಿನ ವ್ಯವಹಾರದ ವೈಷಮ್ಯದಿಂದ ಬೆಳ್ಳಂಬೆಳಿಗ್ಗೆ ಶೂಟೌಟ್ ಪ್ರಕರಣ ಹತ್ಯೆಯಲ್ಲಿ ಅಂತ್ಯಗೊಂಡಿದೆ.

ಜುಲೈ 30ರ ರಾತ್ರಿ ಆರಂಭವಾದ ಮಾತಿನ ಚಕಮಕಿ, ಜುಲೈ 31ರ ಮುಂಜಾನೆ ಭೀಕರ ತಿರುವು ಪಡೆದುಕೊಂಡಿದೆ. ಹಣಕಾಸಿನ ವ್ಯವಹಾರದ ವಿಚಾರವಾಗಿ ಡೆರಿಕ್ ಮತ್ತು ಐವನ್ ನಡುವೆ ಗಲಾಟೆ ನಡೆದಿದ್ದು, ಬಳಿಕ ಡೆರಿಕ್ ಲೊಕೇಶನ್ ಕಳುಹಿಸಿ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿಗೆ ಬರಲು ಸೂಚಿಸಿದ್ದಾನೆ ಎನ್ನಲಾಗಿದೆ.
ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ’ ಎಂದು ಐವನ್ ರಿಚರ್ಡ್ ಮಸ್ಕರೇನಸ್ ರಿಗೆ ಆರೋಪಿ ಡೆರಿಕ್ ಮೆಸೇಜ್ ಹಾಕಿ ಲೊಕೇಶನ್ ಕಳುಸಿದ್ದನೆನ್ನಲಾಗಿದೆ. ಅದರಂತೆ ಲೊಕೇಶನ್ ಆಧರಿಸಿ ಐವನ್ ತನ್ನ ಜೊತೆಗೆ ಏಳು ವರ್ಷದಿಂದ ಇದ್ದ ಮಹಿಳೆಯೋರ್ವರ ಜೊತೆ ಇಂದು ಮುಂಜಾನೆ ಕಾರಿನಲ್ಲಿ ಕುಂದಾಪುರಕ್ಕೆ ಆಗಮಿಸಿ ಇಲ್ಲಿನ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರಿನ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಮುಂಜಾನೆ ಸುಮಾರು 3:15ಕ್ಕೆ ಆರೋಪಿ ಡೆರಿಕ್ ಕಾರಿನಲ್ಲಿ ಅಲ್ಲಿಗೆ ಆಗಮಿಸಿದ್ದಾನೆ. ಈ ವೇಳೆ ಕಾರಿನಿಂದ ಇಳಿದ ಐವನ್ ಅವರ ಸೊಂಟದ ಕೆಳಭಾಗಕ್ಕೆ ಆರೋಪಿ ಐವನ್ ಗುಂಡಿಕ್ಕಿ ಕಾರನ್ನೇರಿ ಪರಾರಿಯಾಗಿದ್ದಾನೆನ್ನಲಾಗಿದೆ.

ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಐವನ್ ರಸ್ತೆಯಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಐವನ್ ಯಾನೆ ಮುನ್ನಾ ಈ ಹಿಂದೆ ಕುಕ್ಕಿಕಟ್ಟೆಯ ಪಿಟ್ಟಿ ನಾಗೇಶ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ.ಈತನ ಮೇಲೆ ಉಡುಪಿ ನಗರ ಠಾಣೆಯಲ್ಲಿ ರೌಡಿ ಶೀಟ್ ಇತ್ತು. ಮುನ್ನಾ ಮೊದಲು ಪಿಟ್ಟಿ ನಾಗೇಶ್ ನ ಡೈವರ್ ಆಗಿದ್ದ.ಯಾವುದೋ ದ್ವೇಷದಿಂದ ಪಿಟ್ಟಿ ನಾಗೇಶ್ ಕೊಲೆಯಲ್ಲಿ ಭಾಗಿಯಾಗಿದ್ದ.ಪಿಟ್ಟಿ ನಾಗೇಶ್ ನ ತಂಡ ಈತನ ಹತ್ಯೆಗಾಗಿ ಕೆಲವು ಬಾರಿ ಸಂಚು ರೂಪಿಸಿತ್ತು.ಆದರೆ ಇಂದು ಮುನ್ನಾ ಕುಂದಾಪುರದಲ್ಲಿ ಕೊಲೆಯಾಗಿದ್ದಾನೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.






