ಮದುವೆಯಾಲು ಒತ್ತಾಯಿಸಿದ ಯುವತಿಯನ್ನು ಚಲಿಸುವ ಬೈಕ್‌ನಲ್ಲಿ ಎಳೆದೊಯ್ದ ಪ್ರಿಯತಮ!
Views: 1
ಕನ್ನಡ ಕರಾವಳಿ ಸುದ್ದಿ: ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮಹಿಳೆಯೊಬ್ಬಳನ್ನು ಬೈಕ್‌ನಲ್ಲಿ ಸುಮಾರು 100 ಮೀಟರ್‌ಗಳಷ್ಟು ದೂರ ರಸ್ತೆಯಲ್ಲೇ ಎಳೆದೊಯ್ದ ಭೀಕರ ಘಟನೆಯೊಂದು ಬಿಹಾರದ ನಲಂದಾ ಜಿಲ್ಲೆಯ ರಾಜ್‌ಗಿರ್ ಪ್ರದೇಶದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ, ಆಕೆ ಮತ್ತು ಆರೋಪಿ ದೀರ್ಘಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿಯು ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನು. ಆದರೆ, ಇತ್ತೀಚೆಗೆ ಮದುವೆಯಾಗಲು ನಿರಾಕರಿಸುತ್ತಿದ್ದನು. ಘಟನೆ ನಡೆದ ದಿನದಂದು ಇಬ್ಬರ ನಡುವೆ ಈ ವಿಷಯವಾಗಿ ತೀವ್ರ ವಾಗ್ವಾದ ನಡೆದಿದೆ.
ಮಾತುಕತೆ ವಿಕೋಪಕ್ಕೆ ತಿರುಗಿದಾಗ, ಆರೋಪಿಯು ತನ್ನ ಬೈಕ್‌ನಲ್ಲಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯು ಆತನ ಬೈಕ್ ಹಿಡಿದು ತಡೆಯಲು ಯತ್ನಿಸಿದ್ದಾಳೆ. ಆದಾಗ್ಯೂ ಕರುಣೆಯಿಲ್ಲದೆ ಬೈಕ್ ವೇಗವನ್ನು ಹೆಚ್ಚಿಸಿದ ಪ್ರಿಯಕರ, ಮಹಿಳೆಯನ್ನು ರಸ್ತೆಯಲ್ಲೇ ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದೊಯ್ದಿದ್ದಾನೆ. ಈ ಹಂತದಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಲ್ಲೇ ಮಗುಚಿ ಬಿದ್ದಿದೆ.
ಧರ್ಮದೇವಟು ಕೊಟ್ಟ ಸಾರ್ವಜನಿಕರು:
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿದ್ದಾರೆ. ಈ ವೇಳೆ ಆತ “ಈಕೆ ನನ್ನ ಹೆಂಡತಿ, ಇದು ನಮ್ಮ ವೈಯಕ್ತಿಕ ವಿಷಯ” ಎಂದು ಕಿರುಚಾಡುವುದು ವೀಡಿಯೋದಲ್ಲಿ ದಾಖಲಾಗಿದೆ. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಪ್ರೀತಿಸುತ್ತಿದ್ದರು ಎಂಬುದು ಮಾತ್ರ ದೃಢಪಟ್ಟಿದೆ.
ಆರೋಪಿಯು ನವಾಡಾ ಜಿಲ್ಲೆಯವನಾಗಿದ್ದು, ಸರ್ಕಾರಿ ಕಚೇರಿಯೊಂದರಲ್ಲಿ ಲ್ಯಾಂಡ್ ಸರ್ವೇಯರ್ (ಭೂ ಮಾಪಕ) ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಮದುವೆಯಾಗಲು ನಿರಾಕರಿಸಿದ್ದೇ ಈ ಜಗಳಕ್ಕೆ ಮುಖ್ಯ ಕಾರಣ ಎಂದು ರಾಜ್‌ಗಿರ್ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯು ನವಾಡಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯ ನಂತರ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯರು ಚಿತ್ರೀಕರಿಸಿದ ಈ ಘಟನೆಯ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.






