ಇತರೆ

ಲಾವಣ್ಯ ಹತ್ಯೆ ಪ್ರಕರಣ: ಇಲಿ ಪಾಷಾಣ  ಸೇವಿಸಿದ್ದ ಆರೋಪಿ11 ದಿನಗಳ ಚಿಕಿತ್ಸೆಯ ಬಳಕ ಪೊಲೀಸ್ ವಶಕ್ಕೆ 

Views: 32

ಕನ್ನಡ ಕರಾವಳಿ ಸುದ್ದಿ: ಬಂಟ್ವಾಳ ಬಿಸಿ ರೋಡ್ ಕೆ.ಎಸ್.ಆ‌ರ್.ಟಿ.ಸಿ. ಬಸ್‌ ನಿಲ್ದಾಣದಲ್ಲಿ ನಡೆದ ಲಾವಣ್ಯ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಪ್ರಕರಣದ ಆರೋಪಿ ಚೇತನ್ ಅವರನ್ನು ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಕ್ಯಪದವು ನಿವಾಸಿ ಲಾವಣ್ಯ ಅವರನ್ನು ಏಕಮುಖ ಪ್ರೀತಿಯ ಹಿನ್ನೆಲೆಯಲ್ಲೇ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಮಾರಕಾಸ್ತ್ರದಿಂದ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಬಳಿಕ ಆತ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿ ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದರು.

ಆತ ವಿಷಕಾರಿ ಪದಾರ್ಥ ಸೇವಿಸಿದ್ದಾನೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಮೊದಲು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆರೋಪಿ ಬಂಟ್ವಾಳ ನಗರ ಪೊಲೀಸರ ವಶದಲ್ಲಿದ್ದು, ಕಾನೂನು ಪ್ರಕ್ರಿಯೆಯಂತೆ ಬಂಧನಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ತನಿಖೆಯ ಅಗತ್ಯವನ್ನು ಆಧರಿಸಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದ್ದು, ಈ ಕುರಿತು ಅಂತಿಮ ತೀರ್ಮಾನವನ್ನು ನ್ಯಾಯಾಲಯವೇ ಕೈಗೊಳ್ಳಲಿದೆ. ಪೊಲೀಸ್ ಕಸ್ಟಡಿ ದೊರೆತಲ್ಲಿ ಆರೋಪಿಯ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.

ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳ ಕ್ರಮ, ಆರೋಪಿತ ಉದ್ದೇಶ, ಘಟನೆಯ ಪೂರ್ವಾಪರ ಹಾಗೂ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿಯಲಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಉದ್ದೇಶದ ಕುರಿತು ಅಧಿಕೃತ ಚಿತ್ರಣ ಸ್ಪಷ್ಟವಾಗುವ ಸಾಧ್ಯತೆ ಇದೆ.

Related Articles

Back to top button
error: Content is protected !!