ಉಡುಪಿ ಜಿ.ಪ,ತಾ.ಪ ಕ್ಷೇತ್ರ ಪುನರ್ ವಿಂಗಡನೆ :ಅಂತಿಮ ಕರಡು ಪ್ರತಿ ಚುನಾವಣಾ ಆಯೋಗಕ್ಕೆ

Views: 0
ಜಿಲ್ಲಾ ಪಂಚಾಯತ್ ಕ್ಷೇತ್ರ 30 ರಿಂದ 35,000 ಸಾವಿರ ಜನಸಂಖ್ಯೆಗೆ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ 10 ರಿಂದ 12 ಸಾವಿರ ಜನಸಂಖ್ಯೆಗೆ ಕ್ಷೇತ್ರ ವಿಂಗಡಿಸಲಾಗಿದೆ.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಜಿಲ್ಲಾಡಳಿತ ವತಿಯಿಂದ ಅಂತಿಮ ಕರಡು ಪ್ರತಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ.
ಈ ವಿಂಗಡಣೆಯಂತೆ ಉಡುಪಿ ಜಿಲ್ಲೆಯಲ್ಲಿ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಹೆಚ್ಚಳವಾಗಿದೆ. ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆ ಹಿಂದಿನಂತೆ ಜಿಲ್ಲೆಯಲ್ಲಿ ಒಟ್ಟು 95 ಕ್ಷೇತ್ರಗಳು ಯಥಾಸ್ಥಿತಿಯಲ್ಲಿವೆ.
ಜಿಲ್ಲೆಯಲ್ಲಿ ಈ ಹಿಂದೆ 26 ಜಿಲ್ಲಾ ಪಂಚಾಯತ್ ಕ್ಷೇತ್ರ ಇದ್ದು,ಈ ಬಾರಿ ಈ ಸಂಖ್ಯೆ 28ಕ್ಕೆ ಏರಿದೆ. ಉಡುಪಿ, ಕಾರ್ಕಳ ತಾಲೂಕಿನ ತಲಾ ನಾಲ್ಕು ಕಾಪುವಿನಲ್ಲಿ ಮೂರು ಬ್ರಹ್ಮಾವರದಲ್ಲಿ ಐದು, ಬೈಂದೂರು ಮೂರು, ಕುಂದಾಪುರದಲ್ಲಿ ಏಳು, ಹೆಬ್ರಿಯಲ್ಲಿ ಎರಡು ಕ್ಷೇತ್ರಗಳಿವೆ.
ಬ್ರಹ್ಮಾವರ ತಾಲೂಕಿನಲ್ಲಿ ಉಪ್ಪೂರು ಹೊಸ ಜಿಲ್ಲಾ ಪಂಚಾಯತ್ ಕ್ಷೇತ್ರವಾದರೆ, ಹೆಬ್ರಿ ತಾಲೂಕಿನಲ್ಲಿ ಚಾರ ಹೊಸ ಕ್ಷೇತ್ರವಾಗಿದೆ. ಕಳೆದ ಬಾರಿ ಹಿರಿಯಡ್ಕ ಜಿಲ್ಲಾ ಪಂಚಾಯತ್ ಕ್ಷೇತ್ರವಿದ್ದರೆ ಈ ಬಾರಿ 80 ಬಡಗಬೆಟ್ಟು ಕ್ಷೇತ್ರವಾಗಿದೆ.
ಹಿರಿಯಡ್ಕ ಕ್ಷೇತ್ರದ ಕೆಲವಂಶ 80 ಬಳಗಬೆಟ್ಟು ಕ್ಷೇತ್ರಕ್ಕೆ ಸೇರಿದರೆ ಕೆಲವು ಅಂಶ ಪೆರಡೂರು ಕ್ಷೇತ್ರಕ್ಕೆ ಹಂಚಿಕೆಯಾಗಿದೆ. ಕೆಲವು ಭಾಗವನ್ನು ಹೊಸ ಕ್ಷೇತ್ರವಾದ ಉಪ್ಪೂರಿಗೆ ಹಂಚಿಕೆ ಮಾಡಲಾಗಿದೆ.
ಹಿಂದಿನ ಕಟಪಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ಈಗ ಕುರ್ಕಾಲು ಕ್ಷೇತ್ರವಾಗಿದೆ. ಎಲ್ಲೂರು ಕ್ಷೇತ್ರ ಶಿರ್ವ ಕ್ಷೇತ್ರವಾಗಿದೆ. ಮಂದರ್ತಿ ಮತ್ತು ಕೋಟದ ಕೆಲವು ಗ್ರಾಮಗಳನ್ನು ಹೊಸದಾಗಿ ಶಿರಿಯಾರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಲಾಗಿದೆ. ಈ ಹಿಂದೆ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದ್ದ ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಈಗ ಒಂದೇ ವಿಧಾನಸಭಾ ಕ್ಷೇತ್ರದೊಳಗೆ ಬಂದಿದೆ.
ಬೈಂದೂರಿನ ಮೂರು ಗ್ರಾಮ ಪಂಚಾಯತಿಗಳು ಲುಪ್ತಗೊಂಡು ಪಟ್ಟಣ ಪಂಚಾಯತ್ ಆದಕಾರಣ ಅಲ್ಲಿ ಬದಲಾವಣೆಗಳು ಕಂಡಿವೆ. ಕ್ಷೇತ್ರಗಳ ವ್ಯಾಪ್ತಿ ಬದಲಾವಣೆಯಾಗಿದೆ. ಬೈಂದೂರು ಕ್ಷೇತ್ರ ಲುಪ್ತಗೊಂಡು ಕೊಲ್ಲೂರು ಹೊಸ ಕ್ಷೇತ್ರವಾಗಿದೆ.ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನು ರಚಿಸಲಾಗಿದೆ. ತಾಲೂಕು ಪಂಚಾಯತ್ ಕ್ಷೇತ್ರಗಳು ಸಂಪೂರ್ಣವಾಗಿ ಜಿಲ್ಲಾ ಪಂಚಾಯತ್ ಕ್ಷೇತ್ರದೊಳಗೆ ಇರಬೇಕು ಮತ್ತು ಗ್ರಾಮ ಪಂಚಾಯಿತಿಗಳನ್ನು ವಿಭಜಿಸಿದೆ .






