ಬ್ರಹ್ಮಾವರ: ಬೈಕಾಡಿಯಲ್ಲಿ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರ ದಾಳಿ: ಮೂವರ ಬಂಧನ
Views: 40
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ತಮ್ಮ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಬೈಕಾಡಿ ಗ್ರಾಮದ ಬೈಕಾಡ್ತಿ ಅಮ್ಮನವರ ದೇವಸ್ಥಾನದ ಎದುರು ಕೆಲವು ವ್ಯಕ್ತಿಗಳು ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ, ಹಿಂಸಾತ್ಮಕವಾಗಿ ಮನೋರಂಜನೆ ಹಾಗೂ ಹಣವನ್ನು ಪಣವಾಗಿಟ್ಟು ಜೂಜಾಟ ಆಡಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಈ ಮಾಹಿತಿಯನ್ನಾಧರಿಸಿ ಪೊಲೀಸರು ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದಾಗ, ಅಲ್ಲಿ ಸೇರಿದ್ದ ಜೂಜುಕೋರರು ಕೋಳಿಗಳನ್ನು ಹಿಡಿದುಕೊಂಡು ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೂವರನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದ 6 ಕೋಳಿಗಳು, 1 ಬಾಳ್ (ಕತ್ತಿ), ಬಾಳ್ ಕಟ್ಟಲು ಉಪಯೋಗಿಸಿದ ಹಗ್ಗದ ತುಂಡು ಹಾಗೂ ಪಣಕಿಟ್ಟ ರೂ.1.500 ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






