ಸುರತ್ಕಲ್ ಕೃಷ್ಣಾಪುರ: ಹುಡುಗಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದಕ್ಕೆ ಅಣ್ಣನಿಂದಲೇ ತಮ್ಮನ ಹತ್ಯೆ
Views: 66
ಕನ್ನಡ ಕರಾವಳಿ ಸುದ್ದಿ: ರಾತ್ರಿ ಮನೆಯಲ್ಲಿ ನಿದ್ರಿಸುತ್ತಿದ್ದ ತಮ್ಮನನ್ನು ಕೊಡಲಿಯಿಂದ ಕಡಿದು ಕೊಲೆ ಮಾಡಿದ ಘಟನೆ ಕೃಷ್ಣಾಪುರ ಮಠದ ಸಮೀಪದ ಬಾಡಿಗೆ ಮನೆಯಲ್ಲಿ ಸಂಭವಿಸಿದೆ.
ಬಳ್ಳಾರಿ ಕುಷ್ಟಗಿಯ ಮಲ್ಲಿಕಾರ್ಜುನ (19) ಮೃತ ಯುವಕ. ಸಹೋದರ ಸೋಮನಾಥ ಪ್ರಕರಣದ ಆರೋಪಿ. ಆತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಸುರತ್ಕಲ್ ಕೃಷ್ಣಾಪುರದಲ್ಲಿ ನಡೆದ ಯುವಕನ ಕೊಲೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಹುಡುಗಿಯೊಂದಿಗೆ ತನ್ನ ತಮ್ಮ ಮೊಬೈಲ್ ನಲ್ಲಿ ಮಾತನಾಡಿದಕ್ಕೆ ನಡೆದ ಜಗಳ ವಿಕೋಪಕ್ಕೇರಿ ಸ್ವಂತ ಅಣ್ಣನೇ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ತಮ್ಮನಾದ ಮಲ್ಲಿಕಾರ್ಜುನ ಯಾವುದೋ ಹುಡುಗಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಆ ಸಮಯ ಆರೋಪಿಯು ವಿರೋಧವನ್ನು ವ್ಯಕ್ತಪಡಿಸಿದ್ದಾನೆ. ಇದಕ್ಕೆ ತಮ್ಮನಾದ ಮಲ್ಲಿಕಾರ್ಜುನ ಉಡಾಫೆಯಿಂದ ಆರೋಪಿಗೆ ಬೈದಿದ್ದರಿಂದ ಕೋಪಗೊಂಡ ಆರೋಪಿ ತನ್ನ ತಮ್ಮ ಮಲ್ಲಿಕಾರ್ಜುನನು ಮಲಗಿದ ನಂತರ ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಕೃಷ್ಣಾಪುರ ಮಠ ರಸ್ತೆಯ ಪರಿಸರದಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಸೋಮನಾಥನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






