ಸಮಾಧಿಯಿಂದ ತಾಯಿಯ ಶವ ಹೊರತೆಗೆದು ಬೈಕ್‌ನಲ್ಲಿ ಸಾಗಿಸಿ ಸಿಕ್ಕಿಬಿದ್ದ ಪುತ್ರರ ಸೆರೆ
Views: 134
ಕನ್ನಡ ಕರಾವಳಿ ಸುದ್ದಿ: ತಾಯಿಯ ಅಸಹಜ ಸಾವಿನ ತನಿಖೆಯ ಬಗ್ಗೆ ಅನುಮಾನಗೊಂಡ ಪುತ್ರರಿಬ್ಬರು ಮರು ಮರಣೋತ್ತರ ಪರೀಕ್ಷೆಗೆ ಶವವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಸಿಕ್ಕಿಬಿದ್ದಿದ್ದಾರೆ. 75 ದಿನಗಳ ಹಿಂದೆ ಸಮಾಧಿಯಾಗಿದ್ದ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುವಾಗ ಸಂಭವಿಸಿದ ಅಪಘಾತದಿಂದ ವಿಲಕ್ಷಣ ಘಟನೆ ಬಹಿರಂಗವಾಗಿದೆ.
ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಶವವನ್ನು ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ (58) ಅವರದ್ದು ಎನ್ನಲಾಗಿದೆ.
ನ್ಯಾಯಾಲಯದ ಅನುಮತಿ ಪಡೆಯದೇ ಸಮಾಧಿಯಿಂದ ಶವ ಹೊರತೆಗೆದ ಪುತ್ರರಾದ ಮಂಜುನಾಥ್ ಹಾಗೂ ವೆಂಕಟೇಶ್ ವಿರುದ್ದ ಮಲೇಬೆನ್ನೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶವದ ಖಚಿತತೆಗೆ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ.
ಆದಾಪುರ ಗ್ರಾಮದಲ್ಲಿ ಸಮಾಧಿಯಾಗಿದ್ದ ತಾಯಿಯ ಶವವನ್ನು ಪುತ್ರರಿಬ್ಬರು ಶನಿವಾರ ರಾತ್ರಿ ಹೊರ ತೆಗೆದಿದ್ದರು. ಶವವನ್ನು ಬಟ್ಟೆಯಲ್ಲಿ ಸುತ್ತಿ ದ್ವಿಚಕ್ರ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಿದ್ದರು. ನಗರದ ನೂತನ್ ಕಾಲೇಜು ರಸ್ತೆಯಲ್ಲಿ ಸವಾರನ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ನೆಲಕ್ಕೆ ಉರುಳಿತ್ತು. ರಸ್ತೆಯಲ್ಲಿ ಬಿದ್ದ ಶವವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ತನಿಖೆಯ ಮೇಲೆ ಅನುಮಾನ
ಆದಾಪುರ ಗ್ರಾಮದ ಮನೆಯ ಕೊಠಡಿಯೊಂದರಲ್ಲಿ ಈರಮ್ಮ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಏ.29ರ ರಾತ್ರಿ ಪತ್ತೆಯಾಗಿತ್ತು. ‘ತಾಯಿ ಸಾವು ಆತ್ಮಹತ್ಯೆಯಲ್ಲ ಕೊಲೆ’ ಎಂದು ಪ್ರತಿಪಾದಿಸಿದ ಪುತ್ರರಿಬ್ಬರು ದೂರು ನೀಡಿದ್ದರು. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆದಿತ್ತು.
‘ಪ್ರಕರಣ ದಾಖಲಿಸಿದ ಪರಿಣಾಮ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಪ್ರಭಾವಿಗಳು ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ತನಿಖೆಯ ಬಗ್ಗೆ ಅನುಮಾನಗಳಿವೆ. ಹೀಗಾಗಿ, ಮರು ಮರಣೋತ್ತರ ಪರೀಕ್ಷೆಗೆ ಶವವನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಿದ್ದೆವು’ ಎಂದು ಈರಮ್ಮ ಅವರ ಪುತ್ರ ಮಂಜುನಾಥ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.






