ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ? ಹೊಸಬರಿಗೆ ಆದ್ಯತೆ ನೀಡಿ: ರಾಹುಲ್ ಗಾಂಧಿ
Views: 9
ಕನ್ನಡ ಕರಾವಳಿ ಸುದ್ದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಸಂಪುಟವನ್ನು ವಿಸ್ತರಿಸಿ, ಯಾರನ್ನು ಸಚಿವರನ್ನಾಗಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು. ಆದರೆ ರಾಹುಲ್ ಗಾಂಧಿಯೊಂದಿಗೆ ಸಭೆ ನಡೆಸುವ ಹೊತ್ತಿಗೆ ಕೌಟುಂಬಿಕ ಕಾರಣಗಳಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರಿಂದ ಚರ್ಚೆ ಅಪೂರ್ಣಗೊಂಡಿದೆ. ಆದ್ದರಿಂದ ಸಂಪುಟ ವಿಸ್ತರಣೆ ಕನಿಷ್ಠ ಮೂರಾಲ್ಕು ದಿನಕ್ಕೆ ಮುಂದೆ ಹೋಗಿದೆ. ತಡರಾತ್ರಿ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಿಂದ ವಾಪಾಸಾಗಿದ್ದಾರೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಿದ್ದಾರೆ.
ಹೊಸಬರಿಗೆ ಆದ್ಯತೆ ನೀಡಿ: ಇನ್ನು ರಾಹುಲ್ ಗಾಂಧಿ ಅವರೊಂದಿಗೆ ಸಿಎಂ, ಮಾಜಿ ಸಿಎಂ ಸಭೆ ನಡೆಸಿದಾಗ ರಾಜ್ಯ ನಾಯಕರು ಒಂದು ಪಟ್ಟಿಯನ್ನು ನೀಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಹೊಸಬರಿಗಿಂತ ಹಳಬರಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಿರುವುದನ್ನು ಗಮನಿಸಿದ ರಾಹುಲ್ ಗಾಂಧಿ ಇನ್ನೊಂದು ಪಟ್ಟಿ ಸಿದ್ದಪಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ.
ಹಿಂದಿನ ಸಂಪುಟದಲ್ಲಿದ್ದ ಐದಾರು ಸಚಿವರಿಗಷ್ಟೇ ಮತ್ತೆ ಸಚಿವರಾಗುವ ಭಾಗ್ಯ ಸಿಗಲಿದೆ. ಉಳಿದಂತೆ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆಗಳಿವೆ. ಸಚಿವ ಸಂಪುಟದಲ್ಲಿ 20 ಸ್ಥಾನಗಳು ಖಾಲಿಯಿದ್ದು, ಈ ಇಪ್ಪತ್ತು ಸ್ಥಾನಗಳಲ್ಲಿ ಕನಿಷ್ಠ 10ರಿಂದ 12 ಮಂದಿ ಹೊಸಬರಿಗೆ ಸಚಿವ ಪಟ್ಟಸಿಗುವುದು ಬಹುತೇಕ ನಿಶ್ಚಿತ ಎಂದು ಹೇಳಲಾಗಿದೆ.
ಗುರುವಾರ ತಡರಾತಿ, ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆಯಾಗಲಿದ್ದು, ಈ ಸಭೆಯ ಬಳಿಕ ಸಂಪುಟಕ್ಕೆ ಯಾರೆಲ್ಲ ಸೇರ್ಪಡೆ ಯಾಗಲಿದ್ದಾರೆ? ಹೈಕಮಾಂಡ್ ಯಾರ ಹೆಸರನ್ನು ಶಿಫಾರಸು ಮಾಡಲಿದ್ದಾರೆ? ಎನ್ನುವ ಸ್ಪಷ್ಟನೆ ಸಿಗಲಿದೆ. ಆದರೆ ಮಲ್ಲಿಕಾರ್ಜುನ ಅವರು ಬೆಂಗಳೂರಿನಲ್ಲಿರುವುದರಿಂದ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವುದಿಲ್ಲ, ಖರ್ಗೆ ಅವರು ದೆಹಲಿಗೆ ವಾಪಸಾದ ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿದ ಬಳಿಕವೇ, ಸ್ಪಷ್ಟನೆ ಸಿಗಲಿದೆ ಎಂದು ಹೇಳಲಾಗಿದೆ.






