ಬಿಜೆಪಿ ಮುಖಂಡ ಪ್ರವಿಣ್ ನೆಟ್ಟಾರು ಕೊಲೆ ಪ್ರಕರಣ:ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ
Views: 81
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳಿಂದ ಅಡಗಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕಡೆಗೂ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಶಾದ್ (32) ಬೆಂಗಳೂರಿನಲ್ಲಿ ಸಿಕ್ಕಿಬಿದ್ದರೆ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ ಅಬ್ದುಲ್ ನಾಸಿರ್ (41) ನನ್ನು ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ಕೃತ್ಯ ಎಸಗಿದ್ದ ಪ್ರಮುಖ ಆರೋಪಿಗಳಿಗೆ ಮೈಸೂರು ಮತ್ತು ಚಾಮರಾಜನಗರದಲ್ಲಿ ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ಅಡಗಿಕೊಳ್ಳಲು ವ್ಯವಸ್ಥೆ ಮಾಡಿದ್ದ ಆರೋಪ ಇವರ ಮೇಲಿದ್ದು ಒಟ್ಟು 27 ಜನ ಆರೋಪಿಗಳ ಲಿಸ್ಟ್‌ನಲ್ಲಿ ಇವರನ್ನೂ ಸೇರಿಸಲಾಗಿತ್ತು.
ಪ್ರಕರಣದ ಬೆನ್ನತ್ತಿದ್ದ ಎನ್‌ಐಎ ಅಧಿಕಾರಿಗಳು ಒಬ್ಬೊಬ್ಬರನ್ನೇ ಬಲೆಗೆ ಕೆಡವಿದ್ದರು. ಕೊನೆಗೆ ಆರು ಮಂದಿ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ ಅವರ ಪತ್ತೆಗಾಗಿ ಮಾಹಿತಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದರು.
ಈ ಪೈಕಿ ಸೋನವಾರಪೇಟೆಯ ಹಾನಗಲ್ಲು ಸಿವಾಸಿ ಅಬ್ದುಲ್ ನಾಸಿರ್ (24) ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿತ್ತು. ಆದರೂ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು 2025ರ ಎಪ್ರಿಲ್‌ನಲ್ಲಿ ತಲೆಮರೆಸಿಕೊಂಡ ನಾಲ್ವರು ಆರೋಪಿಗಳ ಬಗ್ಗೆಯೂ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
2022ರ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಹಿಂದು ಮುಖಂಡರನ್ನು ಗುರಿಯಾಗಿಸಿದ ಟಾರ್ಗೆಟ್ ಹತ್ಯೆಯ ಭಾಗವಾಗಿ ಕೊಲೆ ನಡೆಸಿದ್ದರು ಎಂಬುದಾಗಿ ಎನ್‌ಐಎ ಜಾರ್ಜ್‌ಶೀಟ್ ಸಲ್ಲಿಸಿತ್ತು.
ತಲೆಮರೆಸಿಕೊಂಡಿದ್ದವರು ವೇಷ ಮರೆಸಿಕೊಂಡು ಬೆಂಗಳೂರು ಮತ್ತು ಕೇರಳದಲ್ಲಿ ಅಡಗಿದ್ದಾರೆಂಬ ಶಂಕೆಯಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ಕೊಟ್ಟವರಿಗೆ ತಲಾ ಎರಡು ಲಕ್ಷದ ಬಹುಮಾನದ ಆಫರ್ ನೀಡಲಾಗಿತ್ತು.






