ಬ್ರಹ್ಮಾವರ ಹೈಸ್ಕೂಲ್ ವಿದ್ಯಾರ್ಥಿಯನ್ನು ಅಪಹರಿಸಿ ಗಂಭೀರ ಹಲ್ಲೆ: ಮೂವರು ಅರೆಸ್ಟ್
Views: 345
ಕನ್ನಡ ಕರಾವಳಿ ಸುದ್ದಿ: 9ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಕೇರಿ ವಾರಂಬಳ್ಳಿ ಗ್ರಾಮದ ಕುಮಾರ ಚಾವಡಿ ದೇವಸ್ಥಾನದ ಹತ್ತಿರ ನಿವಾಸಿ ರವೀಶ್ ಆಚಾರ್ಯನ ಮಗ ವಿಖ್ಯಾತ್ ಆಚಾರ್ಯ(19) ಮತ್ತು ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ಜುಮ್ಮಾ ಮಸೀದಿ ಹತ್ತಿರ ನಿವಾಸಿ ಪ್ರಶಾಂತ ನಾಯಕ್‌ನ ಮಗ ಸುಚಿತ್ ನಾಯಕ್(20) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಬಾಲಾಪರಾಧಿಯಾಗಿದ್ದಾನೆ.
ಬ್ರಹ್ಮಾವರದ ಮಟಪಾಡಿ ಗ್ರಾಮ ನಿವಾಸಿ ನರಸಿಂಹ ಎಂಬುವರ ಪುತ್ರ ಅಪ್ರಾಪ್ತ ವಯಸ್ಸಿನ ಬಾಲಕ ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಕಲಿಯುತ್ತಿದ್ದು, ಆತನನ್ನು ಜೂನ್ 1ರಂದು ಬೆಳಿಗ್ಗೆ 08:30 ಗಂಟೆಗೆ ಆರೋಪಿಗಳು ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಪಹರಿಸಿಕೊಂಡು ಕೇರಳ ರಾಜ್ಯದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿರುವ ವುಡ್ ಕಂಪೆನಿಗೆ ಬಲತ್ಕಾರದಿಂದ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು. ಈ ಬಗ್ಗೆ ಅಪ್ರಾಪ್ತ ಬಾಲಕನು ಮನೆಗೆ ಹೋಗುತ್ತೇನೆಂದು ಹೇಳಿದರೂ ಕೂಡ ಆರೋಪಿಗಳು ಮನೆಗೆ ಕಳಿಸಲು ಅವಕಾಶ ನೀಡಲಿಲ್ಲ. ಜೂನ್ 9ರಂದು ಸಂತ್ರಸ್ಥ ಬಾಲಕನಿಗೆ ವಾಸವಿದ್ದ ಕೋಣೆಯಲ್ಲಿ ಮದ್ಯಾಹ್ನ 1:30 ಗಂಟೆಗೆ ಆರೋಪಿ ಸುಚಿತ್‌ನು ವಯರ್‌ನಿಂದ ಹಲ್ಲೆ ಮಾಡಿ ವಿಖ್ಯಾತನು ಆತನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದು, ಈ ಕೃತ್ಯವನ್ನು ಮುಸ್ತಾಕನು ಮೊಬೈಲ್‌ನಲ್ಲಿ ವೀಡಿಯೊ ಮಾಡಿದ್ದಾನೆ. ವಿಡಿಯೋ ವೈರಲ್ಲಾದ ಬಳಿಕ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂದ್ದು, ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ವಿಖ್ಯಾತ್ ಹಾಗೂ ಸುಚಿತ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರನೇ ಆರೋಪಿ ಅಪ್ರಾಪ್ತನಾಗಿದ್ದು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.






