ಅಪ್ಪ, ಅಮ್ಮ, ತಂಗಿ ಭೀಕರ ಕೊಲೆ ಪ್ರಕರಣ: ಕೃತ್ಯದ ಹಂತ ಬಿಚ್ಚಿಟ್ಟ ಆರೋಪಿ ಶ್ವೇತಾ
Views: 207
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಕೆ.ಆರ್. ಪುರಂನ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ನಡೆದ ಅಪ್ಪ, ಅಮ್ಮ ಹಾಗೂ ತಂಗಿಯ ಭೀಕರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಶ್ವೇತಾಳನ್ನು ತಮಿಳುನಾಡಿನ ಪಾಂಡಿಚೇರಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಶ್ವೇತಾ ತಾನು ಮಾಡಿದ ಕೃತ್ಯದ ಹಂತಗಳನ್ನು ಬಿಚ್ಚಿಟ್ಟಿದ್ದು, ಆಕೆಯ ಹೇಳಿಕೆ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಶ್ವೇತಾ ಹೇಳಿದ್ದೇನು?
ನನಗೆ ಅಮ್ಮನ ಮೇಲೆ ದ್ವೇಷವಿತ್ತು. ಇಷ್ಟಕ್ಕೆಲ್ಲ ಕಾರಣ ಅಮ್ಮ ಮುತ್ತುಲಕ್ಷ್ಮೀ. ಆಕೆ ನನ್ನ ಜೀವನವನ್ನು ಸಂಪೂರ್ಣವಾಗಿ ಕಂಟ್ರೋಲ್ನಲ್ಲಿ ಇಡ್ಕೊಂಡಿದ್ದಳು. ನಾನು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬುದನ್ನು ಆಕೆಯೇ ನಿರ್ಧರಿಸುತ್ತಿದ್ದಳು. ನನ್ನ ವೈಯಕ್ತಿಕ ಬದುಕಿಗೆ ಕಿಂಚಿತ್ತೂ ಸ್ವಾತಂತ್ರ್ಯ ಇರಲಿಲ್ಲ. ನನ್ನ ಇಡೀ ಬದುಕನ್ನು ಆಕೆ ಹಾಳು ಮಾಡ್ತಿದ್ದಾಳೆ ಎಂಬ ಹತಾಶೆ ಕಾಡುತ್ತಿತ್ತು. ಆ ಸಿಟ್ಟಿನಲ್ಲೇ ನಾನು ಅಮ್ಮನನ್ನು ಕೊಲೆ ಮಾಡಿದೆ
ಅಮ್ಮನ ಕೊಲೆ ಮಾಡುವಾಗ ನನ್ನ ಸ್ನೇಹಿತ ಕೆನತ್, ರೂಮ್ ನಲ್ಲಿದ್ದ. ಆತ, ಕಿವಿಗೆ ಹೆಡ್ಫೋನ್ ಹಾಕಿಕೊಂಡು ಒಳಗೆ ಕುಳಿತಿದ್ದ. ಆತ ಅಮ್ಮನ ಕೊಲೆಯಲ್ಲಿ ಭಾಗಿಯಾಗಿರಲಿಲ್ಲ. ಅಮ್ಮನ ಸಾಯಿಸಿದ ನಂತರ ನಾನು ರೂಮಿನಿಂದ ಹೊರಗೆ ಬಂದೆ. ಆ ಸಮಯದಲ್ಲಿ ನನ್ನ ಬಾಯ್ಫ್ರೆಂಡ್ ಕೆನತ್ಗೆ ವಿಷಯ ತಿಳಿಸಿದೆ. ಆತ ಮೃತದೇಹವನ್ನು ಶೌಚಾಲಯದ ಒಳಗೆ ಎಳೆಯಲು ಮತ್ತು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಮಾತ್ರ ನನಗೆ ಸಹಾಯ ಮಾಡಿದ.
ಇಷ್ಟೆಲ್ಲ ಆದ ಬಳಿಕ.. ನಾನು ಅಪ್ಪ ಮತ್ತು ತಂಗಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಮ್ಮ ಫೋನ್ ಎತ್ತದಿರೋದಕ್ಕೆ ಅಂದು ಸಂಜೆ ನನ್ನ ತಂದೆ ಸೋಮಸುಂದರ್ ಮತ್ತು ತಂಗಿ ಸುಪ್ರಿಯಾ ನಾವಿದ್ದ ಅಪಾರ್ಟ್ಮೆಂಟ್ಗೆ ಬಂದರು. ಅವರು ಬರುತ್ತಿದ್ದಂತೆಯೇ ಅಮ್ಮ ಎಲ್ಲಿದ್ದಾಳೆ ಎಂದು ಪ್ರಶ್ನಿಸಿದರು. ಆಗ ನಾನು ಯಾವುದೇ ಅನುಮಾನ ಬಾರದಂತೆ, ‘ಏನೂ ಆಗಿಲ್ಲ, ಸುಮ್ಮನೆ ಬನ್ನಿ’ ಎಂದು ಸುಪ್ರಿಯಳನ್ನು ಕರೆದೊಯ್ದೆ. ಆಕೆಯ ಮೇಲೆ ಹಠಾತ್ತನೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಲೆ ನಂತರ ತಂದೆ ಸೋಮಸುಂದರ್ ಅವರನ್ನೂ ಬಿಡದೆ ಚಾಕುವಿನಿಂದ ಇರಿದೆ.
ಶ್ವೇತಾ ಮತ್ತು ಕೆನತ್ ಲಿವ್-ಇನ್ ಸಂಬಂಧದಲ್ಲಿದ್ದ ವೇಳೆ 30 ಲಕ್ಷ ರೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಾಲ ತೀರಿಸಲು ಹಣ ನೀಡುವಂತೆ ಶ್ವೇತಾ ತನ್ನ ತಂದೆ-ತಾಯಿಯ ಬಳಿ ಕೇಳಿದ್ದಳು. ಆದರೆ ಹಣ ನೀಡಲು ಪೋಷಕರು ನಿರಾಕರಿಸಿದ್ದರು. ಇದಾದ ಬಳಿಕ ಕುಟುಂಬದ ಆಸ್ತಿಯಲ್ಲಿ ಪಾಲು ನೀಡುವಂತೆ ಶ್ವೇತಾ ಒತ್ತಾಯ ಮಾಡಿದ್ದಳು. ಇದೇ ವಿಚಾರವಾಗಿ ಕುಟುಂಬದಲ್ಲಿ ಹಲವು ಬಾರಿ ಗಲಾಟೆ ನಡೆದಿತ್ತು ಎಂಬ ವಿಚಾರ ತಿಳಿದು ಬಂದಿದೆ.






