ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್‌ಗೆ 5 ಸ್ಥಾನ, ಬಿಜೆಪಿಗೆ 2 ಸ್ಥಾನ; ಜೆಡಿಎಸ್ ಅಭ್ಯರ್ಥಿಗೆ ಸೋಲು
Views: 81
ಕನ್ನಡ ಕರಾವಳಿ ಸುದ್ದಿ: ವಿಧಾನಸಭೆಯಿಂದ ವಿಧಾನಪರಿಷತ್ ಗೆ ಇಂದು ನಡೆದ 7 ಸ್ಥಾನಗಳ ಚುನಾವಣೆಯ ಫಲಿತಾಂಶ ಘೋಷಣೆಯಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ 5, ಬಿಜೆಪಿಯ 2 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಜೆಡಿಎಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ಸಿನ ಐದು ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಬಿ.ಎಸ್., ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಕ್ಷದಿಂದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್ ಪಕ್ಷದ ಗೋವಿಂದ ರಾಜು ಸೋಲು ಕಂಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಎಂಎಲ್‌ಸಿ ಅಭ್ಯರ್ಥಿಗಳಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಪಕ್ಷದ ಶಾಸಕರು ವಿಧಾನಸೌಧದಲ್ಲಿ ಸ್ವಾಗತಿಸಿದರು.
ಬಿಜೆಪಿ, ಜೆಡಿಎಸ್ ಗೆ ಅಡ್ಡ ಮತದಾನದ ಆಘಾತ: ಚುನಾವಣೆಯಲ್ಲಿ ಬಿಜೆಪಿಗೆ ಹಾಗೂ ಜೆಡಿಎಸ್ ಗೆ ಅಡ್ಡಮತದಾನದ ಆಘಾತ ಎದುರಾಗಿದೆ. ಬಿಜೆಪಿಯಿಂದ 3 ಅಡ್ಡಮತದಾನ ನಡೆದರೆ, ಜೆಡಿಎಸ್ನಿಂದ 4 ಅಡ್ಡಮತದಾನ ನಡೆದಿದೆ. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಒಟ್ಟು 7 ಅಡ್ಡ ಮತದಾನ ಆಗಿವೆ.
ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜುಗೆ 14 ಮತಗಳು ಬಿದ್ದು, ಸೋಲು ಅನುಭವಿಸಿದ್ದಾರೆ. ಅಚ್ಚರಿ ಎಂಬಂತೆ ಅಡ್ಡಮತದನಾದ ಫಲಶೃತಿಯಾಗಿ ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತಗಳು ಬೀಳುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ಹಾಕಲು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ರಘು ಕೌಟಿಲ್ಯಗೆ ಒಟ್ಟು 29 ಸಿಂಧು ಮತಗಳು ಬಿದ್ದಿದ್ದು, ಅವರಿಗೆ ಬಿದ್ದ 1 ಮತ ಅಸಿಂಧುವಾಗಿದೆ. ಇತ್ತ ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್ ಅವರಿಗೆ 27 ಮೊದಲ ಪ್ರಾಶಸ್ತ್ಯದ ಮತಗಳು ಬಿದ್ದಿವೆ. ಅವರಿಗೆ ಬೀಳಬೇಕಿದ್ದ 30 ಮತಗಳ ಪೈಕಿ 3 ಮತಗಳು ಅಡ್ಡಮತದಾನವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿದ್ದ ಮತ ಎಷ್ಟು?:
ಬಿ.ಕೆ. ಹರಿಪ್ರಸಾದ್ – 30
ಪಿ.ವಿ. ಮೋಹನ್ – 29
ಬಿ.ಎಸ್. ಶಿವಣ್ಣ – 30
ತಿಪ್ಪಣಪ್ಪ ಕಮಕನೂರ – 30
ವಿನಯ್ ಕಾರ್ತಿಕ್ – 32
ಬಿಜೆಪಿ ಅಭ್ಯರ್ಥಿಗಳಿಗೆ ಬಿದ್ದ ಮತ ಎಷ್ಟು?:
ರಘು ಕೌಟಿಲ್ಯ – 29
ಲಿಂಗರಾಜ ಪಾಟೀಲ್ – 27
ಜೆಡಿಎಸ್ ಅಭ್ಯರ್ಥಿಗೆ ಬಿದ್ದ ಮತ ಎಷ್ಟು?:
ಗೋವಿಂದರಾಜು -14






