ಸುಜ್ಞಾನ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ‘ವಿಶ್ವ ಪರಿಸರ ದಿನಾಚರಣೆ’
Views: 29
ಕನ್ನಡ ಕರಾವಳಿ ಸುದ್ದಿ: ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲು ಬಾರ್ಕೂರು ಹಾಗೂ ರೋಟರಿ ಕ್ಲಬ್ ಬಾರ್ಕೂರು (RI ಜಿಲ್ಲೆ 3182) ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದ ಮುಖ್ಯ ಆಯೋಜಕರಾದ ರೋಟೇರಿಯನ್ P.H.F. ಎ. ರತ್ನಾಕರ ಶೆಟ್ಟಿ ಅವರು ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪದ್ಧತಿಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ” ಎಂದು ಒತ್ತಿ ಹೇಳಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಾಲ್ಕರ್ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಡುವಲ್ಲಿ ವಿದ್ಯಾರ್ಥಿಗಳು ವಹಿಸಬಹುದಾದ ಮಹತ್ತರ ಪಾತ್ರದ ಕುರಿತು ಅಮೂಲ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಕಿಶೋರಿ ಎಸ್. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಜಿಲ್ಲೆ 3182ರ ಡಿ.ಜಿ. ದೇವಾನಂದ ಹಾಗೂ ಬಾರ್ಕೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಶೆಟ್ಟಿ ಅವರು ಪರಿಸರ ಸಂರಕ್ಷಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು. ಪ್ರತಿಯೊಬ್ಬ ವ್ಯಕ್ತಿಯೂ ಪರಿಸರವನ್ನು ರಕ್ಷಿಸುವ ಹಾಗೂ ಹಸಿರು ಭವಿಷ್ಯ ನಿರ್ಮಾಣಕ್ಕೆ ತನ್ನದೇ ಆದ ಜವಾಬ್ದಾರಿಯನ್ನು ಹೊಂದಿದ್ದಾನೆ ಎಂಬ ಸಂದೇಶವನ್ನು ಈ ಕಾರ್ಯಕ್ರಮವು ನೆರೆದಿದ್ದವರ ಮನದಲ್ಲಿ ಮೂಡಿಸಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ತನುಜ ಉಪಾಧ್ಯಾಯ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರೆ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಹೇಮಾವತಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪರಿಸರ ತಜ್ಞರು, ರೋಟರಿ ನಾಯಕರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.’






