ಕನ್ನಡ ಕರಾವಳಿ ಸುದ್ದಿ:ಸಾಹಿತ್ಯ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಒಮಾನ್ ಕನ್ನಡಿಗ ಶ್ರೀ ಪಿ.ಎಸ್. ರಂಗನಾಥ್ ಅವರಿಗೆ ಪ್ರತಿಷ್ಠಿತ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ಯನ್ನು ಮೇ.23ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್.ಮಾಜಿ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ನಾಡೋಜ ಡಾ. ಮಹೇಶ್ ಜೋಶಿ ದೂರದರ್ಶನದ ಮಾಜಿ ಹೆಚ್ಚುವರಿ ಮಹಾ ನಿರ್ದೇಶಕರು, ವಿದ್ಯಾ ವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು, ಡಾ. ಹೆಚ್.ಎಲ್.ಎನ್. ರಾವ್, ಸ್ಥಾಪಕ ಅಧ್ಯಕ್ಷರು, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಇವರು ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನಮಾಡಲಾಯಿತು.
ವಿದೇಶದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಅವರ ಸಮರ್ಪಣಾ ಭಾವವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲೂ ಇವರು ತಮ್ಮ ಕೈಲಾದ ಸೇವೆ ಸಲ್ಲಿಸುತಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಎರಡು ದಶಕಗಳ ಪಯಣ
ಕರ್ನಾಟಕದ ಮೂಲದವರಾದ ಶ್ರೀ ರಂಗನಾಥ್ ಅವರು ಕಳೆದ 20 ವರ್ಷಗಳಿಂದ ಮಧ್ಯಪ್ರಾಚ್ಯದಲ್ಲಿ ನೆಲೆಸಿದ್ದಾರೆ. ಕುವೈತ್, ಮತ್ತು ದುಬೈ ನಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡ ಅವರು, ಪ್ರಸ್ತುತ ಒಮಾನ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅವರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.
ಹವ್ಯಾಸವಾಗಿ ಆರಂಭಿಸಿದ ಅವರ ಲೇಖನಗಳು, ಕಥೆಗಳು ಮತ್ತು ಕವನಗಳು ವಿವಿಧ ಕನ್ನಡ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಳ್ಳುವ ಮೂಲಕ ಓದುಗರ ಗಮನ ಸೆಳೆದಿವೆ.
ಸಾಹಿತ್ಯ ಸೇವೆಗೆ ಸಂದ ಗೌರವ
ಆರ್ಯಭಟ ಕಲ್ಚರಲ್ ಆರ್ಗನೈಸೇಶನ್‌ನಿಂದ ನೀಡಲಾಗುವ ಈ ಪ್ರಶಸ್ತಿಯು, ಭಾರತೀಯ ಸಂಸ್ಕೃತಿ, ಕಲೆ ಮತ್ತು ಸಮಾಜಸೇವೆಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಸಾಧಕರಿಗೆ ಸಲ್ಲುವ ಅತ್ಯುನ್ನತ ಗೌರವವಾಗಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಲ್ಲಿ ಶ್ರೀ ರಂಗನಾಥ್ ಅವರ ಪಾತ್ರವನ್ನು ಈ ಪ್ರಶಸ್ತಿ ಸಮಿತಿಯು ಶ್ಲಾಘಿಸಿದೆ. ವಲಸೆ ಬದುಕಿನ ಅನುಭವಗಳನ್ನು ಕನ್ನಡ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಿರುವ ಇವರ ಸಾಧನೆಗೆ ಈ ಪ್ರಶಸ್ತಿ ಗರಿಮೆ ತಂದುಕೊಟ್ಟಿದೆ.
ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯ ಬಗ್ಗೆ
ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತದೆ. ಭಾರತೀಯ ಪರಂಪರೆಯನ್ನು ಜಾಗತಿಕವಾಗಿ ಎತ್ತಿಹಿಡಿಯುವ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಈ ವರ್ಷ 51ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವು 23 ಮೇ 2026ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.
ವೃತ್ತಿಯಲ್ಲಿ ಅಭಿಯಂತರ, ಪ್ರವೃತ್ತಿಯಲ್ಲಿ ಸಾಹಿತಿ
ಪಿ.ಎಸ್. ರಂಗನಾಥ್ ಅವರು ಕಳೆದ 16 ವರ್ಷಗಳಿಂದ ಒಮಾನ್‌ನ ಮಸ್ಕತ್‌ನಲ್ಲಿ ವಿದ್ಯುತ್ ನಿಯಂತ್ರಕ ಉಪಕರಣಗಳ ತಯಾರಿಕಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ದುಬೈ ಮತ್ತು ಕುವೈತ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ವೃತ್ತಿಯಲ್ಲಿ ಅಭಿಯಂತರರಾದರೂ ಇವರೊಬ್ಬ ಹವ್ಯಾಸಿ ಬರಹಗಾರರು. ಇವರು ಬರೆದ ಹಲವಾರು ಕಥೆಗಳು, ಕವನಗಳು, ವಿಷಯಾಧರಿತ ಲೇಖನಗಳು ಮತ್ತು ಪ್ರವಾಸಿ ಲೇಖನಗಳು ವಿವಿಧ ದಿನಪತ್ರಿಕೆ, ಮಾಸ ಪತ್ರಿಕೆ ಮತ್ತು ಕುಂದಾಪುರದಿಂದ ಪ್ರಕಟಿತ ‘ಕನ್ನಡ ಕರಾವಳಿ’ ಆನ್ ಲೈವ್ ವೆಬ್ ತಾಣಗಳಲ್ಲಿ ಪ್ರಕಟಗೊಂಡಿವೆ.
ಹೊರನಾಡಿನಲ್ಲಿ ಕನ್ನಡ ಕಂಪು
ಕೇವಲ ಬರಹಕ್ಕೆ ಸೀಮಿತವಾಗದ ರಂಗನಾಥ್ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಒಮಾನ್ ನಲ್ಲಿ ನೆಲೆಸಿರುವ ಕನ್ನಡಿಗರನ್ನು ಪ್ರೋತ್ಸಾಹಿಸಿ ಅವರಿಂದ ಲೇಖನಗಳನ್ನು ಬರೆಸುವಲ್ಲಿ ಇವರ ಶ್ರಮ ಅಪಾರ. ೨೦೨೫ ರಲ್ಲಿ ಒಮಾನ್ ಕನ್ನಡಿಗರ ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ ಶ್ರೀ ಪಿ.ಎಸ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಈ ಕೃತಿಯಲ್ಲಿ ಒಮಾನ್‌ನಲ್ಲಿ ನೆಲೆಸಿರುವ ಸುಮಾರು 30ಕ್ಕೂ ಹೆಚ್ಚು ಕನ್ನಡಿಗ ಬರಹಗಾರರು ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಕಥೆಗಳು, ಮನಮುಟ್ಟುವ ಕವನಗಳು, ವೈಚಾರಿಕ ಲೇಖನಗಳು ಹಾಗೂ ಚುರುಕಾದ ಚುಟುಕುಗಳನ್ನು ಈ ಸಂಚಿಕೆಯು ಒಳಗೊಂಡಿದೆ.
ಪ್ರಮುಖ ಕೃತಿಗಳು
ಒಮಾನ್ ಕನ್ನಡಿಗರ ಅನುಭವಗಳನ್ನೊಳಗೊಂಡ ಅರಬ್ಬರ ನಾಡಿನಲ್ಲಿ ಕನ್ನಡಿಗರು’ ಪುಸ್ತಕ ಹಾಗೂ ಅದರ ಇಂಗ್ಲಿಷ್ ಆವೃತ್ತಿ ಬಿಯಾಂಡ್ ದ ಹೊರೈಜನ್’ (Beyond the Horizon) ಮತ್ತು ಸಿಂಚನ ಕಥಾಸಂಕಲನ ಇವರ ಸಾಹಿತ್ಯ ಬದ್ಧತೆಗೆ ಸಾಕ್ಷಿ.
ಸಂಘಟನೆ ಮತ್ತು ಸೇವೆ
ಕಳೆದ ಎರಡು ದಶಕ ಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಕಳೆದಿರುವ ಶ್ರೀಯುತರು ಜತೆಗೆ ವಿವಿಧ ಸಂಘಟನೆಗಳ ಮುಖಾಂತರ ಸಾಮಾಜಿಕ ಸೇವೆಯನ್ನು ಸಲ್ಲಿಸುತಿದ್ದಾರೆ. ಈ ಹಿಂದೆ ಒಂದು ಬಾರಿ ಒಮಾನ್ ರಾಷ್ಟ್ರದ ಭಾರತೀಯ ಸಾಮಾಜಿಕ ವೇದಿಕೆಯ ಕರ್ನಾಟಕ ವಿಭಾಗದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗಲ್ಫ್ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.