ಸಾಮಾಜಿಕ

ಮದುವೆ ವಿಚಾರ ಜಗಳ: ಮಗಳನ್ನೇ ಕ್ರೂರವಾಗಿ ಕೊಲೆ ಮಾಡಿದ ತಂದೆ 

Views: 105

ಕನ್ನಡ ಕರಾವಳಿ ಸುದ್ದಿ: ಮದುವೆ ವಿಚಾರದ ಜಗಳದಲ್ಲಿ ಹೆತ್ತ ಮಗಳನ್ನೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ತಂದೆ ತಿಮ್ಮರಾಯಪ್ಪ ಈಗ ಪೊಲೀಸರ ಅತಿಥಿಯಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಂದೆ ನಡೆಸಿದ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ.

ಕೊಲೆಯಾದ ಬಾಲಕಿಯನ್ನು 17 ವರ್ಷದ ಮೇಘನಾ ಎಂದು ಗುರುತಿಸಲಾಗಿದೆ. ಮೇಘನಾಳ ತಾಯಿ ನಿರ್ಮಲ ಅವರು ತನ್ನ ಕಡೆಯ ಸಂಬಂಧಿಕರ ಹುಡುಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು. ಈಗಾಗಲೇ ಹುಡುಗನ ಕಡೆಯವರು ಸೀರೆ ಹಾಗೂ ಮಾಂಗಲ್ಯ ಸರವನ್ನೂ ಖರೀದಿ ಮಾಡಿದ್ದರು. ಮೇಘನಾಗೆ 18 ವರ್ಷ ತುಂಬುತ್ತಿದ್ದಂತೆಯೇ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದ್ದವು.

ಆದರೆ, ಹೆಂಡತಿಯ ಸಂಬಂಧಿಕರಿಗೆ ಮಗಳನ್ನು ಕೊಡಲು ತಿಮ್ಮರಾಯಪ್ಪನಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಮಗಳಿಗೆ ಇನ್ನೂ 17 ವರ್ಷ, ಈಗಲೇ ಮದುವೆ ಮಾಡಿಕೊಡಲ್ಲ ಎಂದು ಈತ ಜಗಳ ತೆಗೆಯುತ್ತಿದ್ದ. ಕಳೆದ ನಾಲೈದು ತಿಂಗಳಿಂದ ಇದೇ ವಿಚಾರವಾಗಿ ಮನೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು.

ಏಪ್ರಿಲ್ 16ರಂದು ಸಂಜೆ ತಾಯಿ ನಿರ್ಮಲ ಅವರು ಕೂಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ಮೇಘನಾ ನಾಪತ್ತೆಯಾಗಿದ್ದಳು. ಮೊಬೈಲ್ ಕೂಡ ಸ್ವಿಚ್‌ ಆಫ್‌ ಆಗಿತ್ತು. ಮೊದಲೇ ನಾಟಕವಾಡಿದ್ದ ತಿಮ್ಮರಾಯಪ್ಪ, ಹೆಂಡತಿಯ ಜೊತೆ ಸೇರಿ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ‘ಮಗಳು ಕಾಣೆಯಾಗಿದ್ದಾಳೆ’ ಎಂದು ಮಿಸ್ಸಿಂಗ್ ಕೇಸ್‌ ದಾಖಲಿಸಿದ್ದ. ಆದರೆ ಪ್ರಕರಣ ದಾಖಲಾದ ನಂತರ ಕಳೆದ 15 ದಿನಗಳಿಂದ ತಿಮ್ಮರಾಯಪ್ಪ ಕೂಡ ನಾಪತ್ತೆಯಾಗಿದ್ದ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

ನಾಪತ್ತೆಯಾಗಿದ್ದ ತಿಮ್ಮರಾಯಪ್ಪನನ್ನು ವಶಕ್ಕೆ ಪಡೆದ ಕಳ್ಳಂಬೆಳ್ಳ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಮಗಳ ಮೇಲೆ ಕೋಪಗೊಂಡಿದ್ದ ಈತ ಮೊದಲು ಅವಳನ್ನು ಬಾವಿಗೆ ತಳ್ಳಿದ್ದಾನೆ. ಅಷ್ಟಕ್ಕೆ ಸಮಾಧಾನವಾಗದೆ ಬಾವಿಯೊಳಗೆ ಕಲ್ಲನ್ನು ಎತ್ತಿಹಾಕಿ ಮಗಳನ್ನು ಹತ್ಯೆ ಮಾಡಿದ್ದಾನೆ. ಆ ಬಳಿಕ ಬಾವಿಯಿಂದ ಮೃತದೇಹವನ್ನು ಮೇಲೆತ್ತಿ, ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಮಣ್ಣು ಮಾಡಿ ಮುಚ್ಚಿ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ.

Related Articles

Back to top button
error: Content is protected !!