ಯುವಜನ

ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ: 35ಲಕ್ಷ ರೂ‌. ಮೌಲ್ಯದ ಗಾಂಜಾ ವಶಕ್ಕೆ

Views: 95

ಕನ್ನಡ ಕರಾವಳಿ ಸುದ್ದಿ :ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಸಿಎ ವಿದ್ಯಾರ್ಥಿನಿಯನ್ನು ಬಂಧಿಸಿ, 35ಲಕ್ಷ ರೂ‌. ಮೌಲ್ಯದ 1.42 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ, ಸದ್ಯ ಕುಂದಾಪುರ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸುಹಾನ (21) ಬಂಧಿತ ಆರೋಪಿ.

ಮೇ 12ರಂದು ಮಾರಾಟ ಮಾಡಲೆಂದು ಸುಹಾನ ಹೈಡ್ರೋವೀಡ್ ಗಾಂಜಾವನ್ನು ಸಾಗಿಸುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆಯ ಪೊಲೀಸರು ತಂಡ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ದಾಳಿ ನಡೆಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಅವಳ ಬಳಿ ಇದ್ದ ಸುಮಾರು 35 ಲಕ್ಷ ರೂ. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೋವೀಡ್ ಗಾಂಜಾ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಇತರ ಸೊತ್ತನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಈ ಮಾದಕದ್ರವ್ಯವನ್ನು ಆರೋಪಿತೆ ಚೆನ್ನೈನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು. ಆರೋಪಿತೆಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026 ಕಲಂ: 8(ಸಿ), 20(ಬಿ) ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಕೇರಳದಿಂದ ಹೈಡ್ರೋ ಗಾಂಜಾ ತರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಈ ವಾರದ ಆರಂಭದಲ್ಲಿ ಬಂಧಿಸಿದ್ದರು. ಅಶೋಕನಗರ, ಮಲ್ಲೇಶ್ವರಂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಆರೋಪಿಗಳನ್ನು ಸೆರೆಹಿಡಿಯಲಾಗಿತ್ತು. ಬಂಧಿತ ಆರೋಪಿತರಿಂದ ಒಟ್ಟು 1.28 ಕೋಟಿ ಮೌಲ್ಯದ 3 ಕೆಜಿ 686 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

 

Related Articles

Back to top button
error: Content is protected !!