ಒಳ್ಳೆ ಸಂಬಂಧ ಬಂದರೆ ಮದುವೆ ಮಾಡೋಣ… ಕೇಳಿಸಿಕೊಂಡ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
Views: 55
ಕನ್ನಡ ಕರಾವಳಿ ಸುದ್ದಿ: ಪೋಷಕರು ಮದುವೆ ಮಾಡಬಹುದು ಎನ್ನುವ ಭಯಕ್ಕೆ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ರೂಪಕೀರ್ತನ ಮೃತ ವಿದ್ಯಾರ್ಥಿನಿ. ಈಕೆ ಇತ್ತೀಚಿಗೆ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದಳು. ಮನೆಯಲ್ಲಿ ಪೋಷಕರು ಒಳ್ಳೆ ಸಂಬಂಧ ಬಂದರೆ ಮದುವೆ ಮಾಡೋಣವೆಂದು ಚರ್ಚೆ ಮಾಡಿಕೊಳ್ಳುತ್ತಿದ್ದರು.
ಈ ಮಾತನ್ನು ಕೇಳಿದ ವಿದ್ಯಾರ್ಥಿನಿ ನನಗೆ ಈಗಲೇ ಮದುವೆ ಬೇಡ ನಾನು ಓದಬೇಕು ಎಂದು ಹೇಳಿದ್ದಾಳೆ. ಪೋಷಕರು ಚರ್ಚೆ ಮಾಡಿದರಷ್ಟೇ ಹೊರತು, ಮದುವೆ ನಿಶ್ಚಯಿಸಿರಲಿಲ್ಲ. ಅಷ್ಟೇ ಅಲ್ಲದೆ ಆಕೆಯನ್ನು ಬಲವಂತ ಕೂಡ ಮಾಡಿರಲಿಲ್ಲ. ಆದ್ರೆ ವಿದ್ಯಾರ್ಥಿನಿ ತನಗೆಲ್ಲಿ ಮದುವೆ ಮಾಡಿಬಿಡುತ್ತಾರೋ ಎನ್ನುವ ಭಯದಿಂದ ಬುಧವಾರ ವಿಷ ಸೇವಿಸಿದ್ದಾಳೆ.
ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಇತ್ತ ಕಡೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮದುವೆಯ ಭಯದಿಂದ ಮನನೊಂದ ರೂಪಕೀರ್ತನಾ, ಮೇ 6 ರಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾಳೆ. ಅಸ್ವಸ್ಥಗೊಂಡಿದ್ದ ಆಕೆಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರೂಪಕೀರ್ತನಾ ಮೃತಪಟ್ಟಿದ್ದಾಳೆ.
ಕಣ್ಣೆದುರೇ ಇದ್ದ ಮಗಳು ಈಗ ಇಲ್ಲವಾಗಿರುವುದನ್ನು ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ನಾವು ಕೇವಲ ಸುಮ್ಮನೆ ಮಾತನಾಡುತ್ತಿದ್ದೆವು ಅಷ್ಟೇ, ಮಗಳಿಗೆ ಬಲವಂತ ಮಾಡಿರಲಿಲ್ಲ. ಆಕೆ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ ಎಂದು ಪೋಷಕರು ಗೋಳಾಡುತ್ತಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓದಿ ಬೆಳಗಬೇಕಾದ ವಿದ್ಯಾರ್ಥಿನಿ ಕ್ಷಣಿಕ ಆವೇಶದಲ್ಲಿ ಜೀವ ಕಳೆದುಕೊಂಡಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.






