ಜಾಗದ ವಿಚಾರದಲ್ಲಿ ಗಲಾಟೆ: ಅಣ್ಣನನ್ನೇ ಕೊಂದ ತಮ್ಮನ ಬಂಧನ
Views: 31
ಕನ್ನಡ ಕರಾವಳಿ ಸುದ್ದಿ : ಕಾರ್ಕಳ ತಾಲೂಕಿನ ಮಿತ್ತಬೆಟ್ಟು ಹಿರಿಯಂಗಡಿ ಪ್ರದೇಶದಲ್ಲಿ ನಡೆದ ಕುಟುಂಬದ ಒಳಗಿನ ಜಾಗ-ಮನೆ ತಕರಾರು ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.
ರಿಚರ್ಡ್ ಡಿಸೋಜ ಮತ್ತು ಅವರ ತಮ್ಮ ಹೆರಾಲ್ಡ್ ಡಿಸೋಜರ ನಡುವೆ ಮನೆ ಹಾಗೂ ಜಾಗದ ವಿಚಾರವಾಗಿ ಕೆಲಕಾಲದಿಂದ ವಿವಾದ ನಡೆಯುತ್ತಿತ್ತು. ಇದೇ ವಿಷಯಕ್ಕೆ ಸಂಬಂಧಿಸಿ ಮಿತ್ತಬೆಟ್ಟು ಹಿರಿಯಂಗಡಿ ಪ್ರದೇಶದಲ್ಲಿರುವ ಜಾಗದಲ್ಲಿ ಇಬ್ಬರ ನಡುವೆ ಗಲಾಟೆ ಸಂಭವಿಸಿದೆ.
ಈ ವೇಳೆ ಆರೋಪಿ ಹೆರಾಲ್ಡ್ ಡಿಸೋಜ ಮರದ ರೀಪು ಅಥವಾ ಯಾವುದೋ ಆಯುಧದಿಂದ ರಿಚರ್ಡ್ ಡಿಸೋಜರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವುದಾಗಿ ಮೃತರ ಪತ್ನಿ ಜೆಸಿಂತ ಡಿಸೋಜ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಹೆರಾಲ್ಡ್ ಡಿಸೋಜನನ್ನು ಡಿವೈಎಸ್‌ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಅಜ್ಮತ್ ಆಲಿ ಹಾಗೂ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






