30 ಕ್ಕೂ ಹೆಚ್ಚು ಸಚಿವಾಕಾಂಕ್ಷಿ ಕೈ ಶಾಸಕರು ದಿಲ್ಲಿಯಲ್ಲೇ ಠಿಕಾಣಿ
Views: 11
ಕನ್ನಡ ಕರಾವಳಿ ಸುದ್ದಿ: ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಕೇಳಿಕೊಂಡು ದೆಹಲಿಯಲ್ಲಿರುವ 30ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿ ಕಾದುಕೂತಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಮವಾರ ಭೇಟಿಯಾದ ಶಾಸಕರ ನಿಯೋಗ, ಮಂಗಳವಾರವೂ ಅಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಲು ದೆಹಲಿಯಿಂದ ವಾಪಸಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ರಾಹುಲ್ ಗಾಂಧಿ ಅವರ ಭೇಟಿಗೆ ಅವಕಾಶ ಸಿಗಬಹುದು ಎನ್ನುವ ಕಾರಣಕ್ಕೆ, ಅಲ್ಲಿಯೇ ಉಳಿದುಕೊಂಡಿದ್ದಾರೆ.
ಖರ್ಗೆ ಅವರಿಂದ ಯಾವುದೇ ಸ್ಪಷ್ಟ ಭರವಸೆ ಬಾರದೇ ಇರುವುದರಿಂದ ಶಾಸಕರು ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ.ವೇಣು ಗೋಪಾಲ್ ಅವರೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದರು. ಮಂಗಳವಾರ ಯಾವ ನಾಯಕರೂ ಭೇಟಿಗೆ ಸಿಕ್ಕಿಲ್ಲ. ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುವುದಕ್ಕೆ ವಿವಿಧ ಮಾರ್ಗದಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ, ಈವರೆಗೆ ರಾಹುಲ್ ಸಮಯ ನಿಗದಿ ಯಾಗಿಲ್ಲ. ತಡರಾತ್ರಿ ವೇಣು ಗೋಪಾಲ್ ಸಿಕ್ಕರೆ ಅವರೊಂದಿಗೆ ಚರ್ಚಿಸಿ, ವಾಪಸಾಗುವ ಲೆಕ್ಕಾಚಾರದಲ್ಲಿ ಶಾಸಕರಿದ್ದಾರೆ ಎನ್ನಲಾಗಿದೆ.
ಖರ್ಗೆ ಅವರನ್ನು ಭೇಟಿ ಮಾಡುವ ಮುನ್ನ ಶಾಸಕರು ಕರ್ನಾಟಕ ಭವನದಲ್ಲಿ ಸಭೆ ನಡೆಸಿ ಸಹಿ ಸಂಗ್ರಹ ನಡೆಸಿದರು. ‘ಸರ್ಕಾರಕ್ಕೆ ಮೇ ತಿಂಗಳಲ್ಲಿ ಮೂರು ವರ್ಷ ತುಂಬಲಿದೆ. ಎರಡೂವರೆ ವರ್ಷಗಳ ಬಳಿಕ ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸ್ಥಾನ ಕಲ್ಪಿಸುವುದಾಗಿ ಹೈಕಮಾಂಡ್ ಭರವಸೆ ನೀಡಿತ್ತು. ಸಂಪುಟದಲ್ಲಿರುವ ಅನೇಕ ಸಚಿವರು ನಿಷ್ಕ್ರೀಯರಾಗಿದ್ದಾರೆ. ಅವರಿಂದ ಪಕ್ಷ ಸಂಘಟನೆಗೆ ಲಾಭ ಆಗುತ್ತಿಲ್ಲ. ಅಂತಹವರನ್ನು ಸಂಪುಟದಿಂದ ಕೈಬಿಡಬೇಕು. 3–4 ಬಾರಿ ಶಾಸಕರಾದವರಿಗೆ ಆದ್ಯತೆ ನೀಡಬೇಕು‘ ಎಂದು ಹಿರಿಯ ಶಾಸಕರು ಮನವಿಯಲ್ಲಿ ಒತ್ತಾಯಿಸಿದ್ದಾರೆ.






