ಮಾಣಿಕ್ಯಧಾರದಲ್ಲಿ ನಾಪತ್ತೆ ಆಗಿದ್ದ ಬಾಲಕಿಯ ಶವ1500 ಅಡಿ ಆಳದ ಕಂದಕದಲ್ಲಿ ಪತ್ತೆ
Views: 152
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರದಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ತೀವ್ರ ಹುಡುಕಾಟದ ನಂತರ, ಬಾಲಕಿ ಶ್ರೀನಂದಾ ಅವರ ಮೃತದೇಹ ಪ್ರಪಾತದಲ್ಲಿ ಪತ್ತೆಯಾಗಿದೆ.
ಮಂಗಳವಾರ ಸಂಜೆ ಸುಮಾರು 6.30ರ ಸುಮಾರಿಗೆ ಮಾಣಿಕ್ಯಧಾರದ ಬಳಿ ಬಾಲಕಿ ಶ್ರೀನಂದಾ ನಾಪತ್ತೆಯಾಗಿದ್ದಳು. ಬಾಲಕಿ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಗುಡ್ಡಗಾಡು ಪ್ರದೇಶ ಮತ್ತು ದಟ್ಟ ಮಂಜಿನ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ನಿರಂತರ ಶೋಧದ ನಂತರ, ಇಂದು ಮಾಣಿಕ್ಯಧಾರದ ಭೀಕರ ಪ್ರಪಾತದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸುಮಾರು 1500 ಅಡಿ ಆಳದ ಕಂದಕದ ಬಳಿ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಅರಿಶಿನಗುಪ್ಪೆ ಬಳಿಯಿಂದ ಹೊರಟಿದ್ದ ವಿಶೇಷ ತಂಡವು ಅರಿಶಿನಗುಪ್ಪೆಯಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮೃತದೇಹವನ್ನು ಗುರುತಿಸಿದೆ. ಬಾಲಕಿಯ ಪತ್ತೆಗಾಗಿ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ತಂಡಗಳು ಹರಸಾಹಸ ಪಟ್ಟಿದ್ದವು. ಅಂತಿಮವಾಗಿ ತಂಡವು ಅತ್ಯಂತ ಕಡಿದಾದ ಮತ್ತು ಅಪಾಯಕಾರಿ ಪ್ರಪಾತದ ಇಳಿಜಾರಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. 300 ಅಡಿ ಎಂದು ಅಂದಾಜಿಸಲಾಗಿದ್ದ ಕಂದಕದ ಆಳ, ಶೋಧದ ವೇಳೆ ಬರೋಬ್ಬರಿ 1500 ಅಡಿ ಇರುವುದು ತಿಳಿದುಬಂದಿದೆ.






