ಅವಳಿ ಸಹೋದರ -ಸಹೋದರಿಯರ ಮದುವೆ; ಒಬ್ಬ ವರ ನದಿಗೆ ಹಾರಿ ಆತ್ಮಹತ್ಯೆ
Views: 113
ಕನ್ನಡ ಕರಾವಳಿ ಸುದ್ದಿ: ಕಾಮಾರೆಡ್ಡಿ ಜಿಲ್ಲೆಯ ಮಚಾರೆಡ್ಡಿ ಮಂಡಲದ ಘನಾಪುರ ಗ್ರಾಮದಲ್ಲಿ ಕೆಲವೇ ದಿನಗಳ ಹಿಂದೆ ವಿಜೃಂಭಣೆಯಿಂದ ನಡೆದಿದ್ದ ಅಪರೂಪದ ವಿವಾಹವೊಂದು ಈಗ ದುರಂತದಲ್ಲಿ ಅಂತ್ಯವಾಗಿದೆ.
‘ಟ್ವಿನ್ಸ್ ಡೇ’ ದಿನದಂದು ಅವಳಿ ಸಹೋದರಿಯರನ್ನು ವಿವಾಹವಾಗಿದ್ದ ಅವಳಿ ಸಹೋದರರ ಪೈಕಿ ದಂಪತಿ ವಿನಯ್ ಕುಮಾರ್ (31) ಎಂಬುವವರು ಮಾನೇರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದ್‌ನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿನಯ್ ಕುಮಾರ್, ಯುಗಾದಿ ಹಬ್ಬದ ದಿನದಂದು ಮನೆಯಿಂದ ಹೊರಗೆ ಹೋದವರು ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಸಂಬಂಧಿಕರು ಹುಡುಕಾಟ ನಡೆಸಿದಾಗ, ಗಂಭೀರರಾವ್ ಪೇಟ್ ಮಂಡಲದ ನಿರ್ಮಲ ಬಳಿಯ ಮಾನೇರು ನದಿಯಲ್ಲಿ ವಿನಯ್ ಅವರ ಮೃತದೇಹ ಪತ್ತೆಯಾಗಿದೆ.
ದುಂಪತಿ ವಿಜಯ್ ಮತ್ತು ವಿನಯ್ ಎಂಬ ಅವಳಿ ಸಹೋದರರು ನೋಡಲು ಒಂದೇ ತರಹ ಇದ್ದರು. ಇವರಿಗಾಗಿ ಸಂಬಂಧ ಹುಡುಕುತ್ತಿದ್ದಾಗ ತಡ್ವಾಯಿ ಮಂಡಲದ ಕೀರ್ತನಾ ಮತ್ತು ಕೀರ್ತಿ ಎಂಬ ಅವಳಿ ಸಹೋದರಿಯರು ಸಿಕ್ಕಿದ್ದರು. ದೈಹಿಕವಾಗಿ ಮಾತ್ರವಲ್ಲದೆ ಗುಣ ಸ್ವಭಾವದಲ್ಲೂ ಸಾಮ್ಯತೆ ಹೊಂದಿದ್ದ ಈ ಎರಡು ಜೋಡಿಗಳ ವಿವಾಹವನ್ನು ಒಂದೇ ಮುಹೂರ್ತದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿತ್ತು.
ಆದರೆ, ಮದುವೆಯಾಗಿ ಒಂದು ತಿಂಗಳು ಕಳೆಯುವ ಮುನ್ನವೇ ಕೀರ್ತಿಯ ಪತಿ ವಿನಯ್ ಈ ನಿರ್ಧಾರ ತೆಗೆದುಕೊಂಡಿರುವುದು ಇಡೀ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






