ರಾಜಕೀಯ

ದಾವಣಗೆರೆಗೆ ಶಾಮನೂರು ಮೊಮ್ಮಗ ಸಮರ್ಥ್, ಬಾಗಲಕೋಟೆಗೆ ಹೆಚ್.ವೈ.ಮೇಟಿ ಪುತ್ರ ಉಮೇಶ :ಕಾಂಗ್ರೆಸ್ ಟಿಕೆಟ್ ಫೈನಲ್

Views: 37

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.‌ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹಾಗೂ ಬಾಗಲಕೋಟೆ ಅಭ್ಯರ್ಥಿಯಾಗಿ ಉಮೇಶ ಹುಲ್ಲಪ್ಪ ಮೇಟಿ ಹೆಸರನ್ನು ಪ್ರಕಟಿಸಿದೆ. ತೀವ್ರ ಪ್ರತಿರೋಧ, ಸಾಕಷ್ಟು ಲಾಬಿ, ಒತ್ತಡ, ವಿರೋಧ, ಗೊಂದಲ, ಸರಣಿ ಸಭೆಗಳ ಬಳಿಕ ಎರಡೂ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೇ ಮಣೆ ಹಾಕಿದೆ.

ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ.

ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಹಾಗೂ ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿತ್ತು.

ಆರಂಭದಿಂದಲೂ ಬಹುತೇಕ ಕುಟುಂಬ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡುವುದಕ್ಕೆ ಮುಸ್ಲಿಂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಇತ್ತ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಗ, ದಿವಂಗತ ಶಾಮನೂರು ಮೊಮ್ಮಗ ಸಮರ್ಥ್ ಟಿಕೆಟ್ ಘೋಷಣೆಗೂ ಮುನ್ನ ಶುಕ್ರವಾರವೇ(ಮಾ.20) ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಳಿಕ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕೂಡ ಉಮೇದುವಾರಿಕೆ ಸಲ್ಲಿಸಿ ಕುತೂಹಲ ಕೆರಳಿಸಿದ್ದರು.

ಬಾಗಲಕೋಟೆಯಲ್ಲಿ ಮಾಜಿ ಸಚಿವ ದಿವಂಗತ ಹೆಚ್.ವೈ.ಮೇಟಿ ಕುಟುಂಬಕ್ಕೇ ಟಿಕೆಟ್ ನೀಡುವುದು ಖಚಿತವಾಗಿತ್ತು. ಆದರೆ, ಕುಟುಂಬದಲ್ಲೇ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟು ಗೊಂದಲ ಉಂಟಾಗಿತ್ತು. ಸಿಎಂ ಸಿದ್ದರಾಮಯ್ಯ ಕುಟುಂಬ ಸದಸ್ಯರನ್ನು ವಿಧಾನಸೌಧಕ್ಕೆ ಕರೆದು ಸುದೀರ್ಘವಾಗಿ ಚರ್ಚೆ ನಡೆಸಿದ್ದರು.

ಹೆಚ್.ವೈ.ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ್, ಪುತ್ರಿಯರಾದ ಮಹಾದೇವಿ ಮೇಟಿ ಹಾಗೂ ಬಾಯಕ್ಕ ಜೊತೆ ಸಿಎಂ ಚರ್ಚೆ ನಡೆಸಿದ್ದರು. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದರು.

ಉಪ ಚುನಾವಣೆಗೆ ಮಾರ್ಚ್ 16ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮಾ.23 (ನಾಳೆ) ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾ.24ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.26ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

Related Articles

Back to top button
error: Content is protected !!