ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರಿನಲ್ಲಿ ಮಾಗಣೆ ಗುರಿಕಾರರ ಸಮಾವೇಶ
Views: 85
ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವೀರೇಶ್ವರ ಸೇವಾ ಸಮಿತಿ, ಸಂಘಟನಾ ಸಮಿತಿ, ಸಮಾಜ ಸೇವಾ ಟ್ರಸ್ಟ್ ಆಶಯದಲ್ಲಿ ಮಾಗಣಿ ಗುರಿಕಾರರ ಸಮಾವೇಶ ಮಾ. 15ರಂದು ನಡೆಯಿತು.
ದೇಗುಲದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ದೇವಸ್ಥಾನದ ಅಭಿವೃದ್ಧಿ, ಉತ್ತಮ ನಿರ್ವಹಣೆ ಮತ್ತು ಭಕ್ತರಿಗೆ ಇನ್ನಷ್ಟು ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ, ಮುಂದಿನ ದಿನಗಳಲ್ಲಿ ಸಮಾಜದ ಹಿತಕ್ಕಾಗಿ ಇನ್ನಷ್ಟು ಬಲವಾದ ಸಂಘಟನಾ ಕಾರ್ಯಕ್ರಮ ಕೈಗೊಳ್ಳುವ ಸಂಕಲ್ಪ ಸಾಕಾರಗೊಳ್ಳಲು ಮಾಗಣಿ ಗುರಿಕಾರರ ಸಹಕಾರದೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ಗುರಿಕಾರರಾದ ಬಸ್ರೂರು ಶ್ರೀ ರಾಜೇಂದ್ರ ಶೆಟ್ಟಿಗಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರಿಕಾರರಿಗೆ ಮಾಹಿತಿ ನೀಡುತ್ತಾ,
ಸಮಾಜದ ಆಚಾರ- ವಿಚಾರ ಸಂಪ್ರದಾಯದಲ್ಲಿ ಬದಲಾವಣೆಯಾದರೂ ರಾಜಿ ಮಾಡಿಕೊಳ್ಳಬಹುದು. ಆದರೆ ಶಾಸ್ತ್ರದಲ್ಲಿ ಯಾವುದೇ ರೀತಿ ಬದಲಾವಣೆ ಮಾಡೋದು ಸಾಧ್ಯವಿಲ್ಲ. ನಾವು ಆಚರಿಸುವ ಪ್ರಕ್ರಿಯೆ ಸರಿಯಾಗಿದ್ದರೆ ಉತ್ತಮ ಫಲ ಸಿಗುತ್ತದೆ. ಅನುಷ್ಠಾನ ನೂರಕ್ಕೆ ನೂರರಷ್ಟು ಪರಿಪೂರ್ಣವಾದರೆ ಸಾನಿಧ್ಯ ವೃದ್ಧಿಯಾಗಿ ಭಕ್ತರ ಅಬೀಷ್ಠೆ ನೆರವೇರುತ್ತದೆ.
ಸಾವಿನ ನಂತರವೂ ಸ್ಥಿತ್ಯಂತರಗೊಳ್ಳದ ಆತ್ಮಕ್ಕೆ ಮೋಕ್ಷ ವಿಧಿ- ವಿಧಾನದಲ್ಲಿ ಹಿರಿಯರ ಸತ್- ಸಂಪ್ರದಾಯ, ಆಯಾ ಕ್ಷೇತ್ರದ ಪ್ರಾದೇಶಿಕತೆ, ಪರಂಪರೆ, ವೈಜ್ಞಾನಿಕತೆಗೆ ಚ್ಯುತಿ ಬಾರದ ಹಾಗೆ ಉಳಿಸಿಕೊಂಡು ಹೋಗಬೇಕು ಎಂದು ಗುರಿಕಾರರಿಗೆ ಕಿವಿಮಾತು ಹೇಳಿದರು.
ದೇಗುಲದ ಆಡಳಿತ ಧರ್ಮದರ್ಶಿಗಳು ಎಲ್ಲಾ ಗುರಿಕಾರರಿಗೆ ಮತ್ತು ಸಹ ಮೊಕ್ತೇಸರರಿಗೆ ತಾಂಬೂಲ ನೀಡಿ ಗೌರವಿಸಿದರು.
ಬಾರ್ಕೂರು ದೇಗುಲದ ಕೂಡುಕಟ್ಟಿಗೆ ಸೇರಿದ ವಕ್ವಾಡಿ, ಬಾರ್ಕೂರು, ಹೆಂಗವಳ್ಳಿ- ಅಮಾಸೆಬೈಲು, ಬಸ್ರೂರು, ಕೋಟ ನೀಲಾವರ- ಸೂರಾಲು, ಜಪ್ತಿ ಮಾಗಣೆಗಳಿಗೆ ಸೇರಿದ ಗುರಿಕಾರರು ಮತ್ತು ಸಹ ಮೊಕ್ತೇಸರರು ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡು ಜಿಜ್ಞಾಸೆಗಳನ್ನು ಪರಿಹರಿಸಿಕೊಂಡರು.
ವೇದಿಕೆಯಲ್ಲಿ ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಾವತಿ ಸದಾಶಿವ ಶೆಟ್ಟಿಗಾರ ಬ್ರಹ್ಮಾವರ ಉಪಸ್ಥಿತರಿದ್ದರು.
ಶ್ರೀ ವೀರೇಶ್ವರ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ ವಂದಿಸಿದರು. ವಕ್ವಾಡಿ ದೇವು ಮನೆ ಶ್ರೀಮತಿ ವೀಣಾ ಶ್ರೀ ಮತ್ತು ಬಾಲಕೃಷ್ಣ ಶೆಟ್ಟಿಗಾರ್, ಪ್ರಜ್ವಲ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.












