ಜನಮನ

ಗ್ಯಾಸ್ ಸಿಲಿಂಡರ್ ಕೊರತೆ: ದೋಸೆ, ಇಡ್ಲಿ ಸೇರಿದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ 

Views: 26

ಕನ್ನಡ ಕರಾವಳಿ ಸುದ್ದಿ: ಎಲ್‌ಪಿಜಿ ಅನಿಲವನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿದ್ದರೂ, ಇನ್ನೂ ದೇಶದ ಬಂದರುಗಳನ್ನು ತಲುಪದೇ ಇರುವ ಕಾರಣ ರಾಜ್ಯಾದ್ಯಂತ ವಾಣಿಜ್ಯ ಸಿಲಿಂಡರ್‌ಗಳ ಹಾಹಾಕಾರ ಮುಂದುವರೆದಿದೆ. ಸಿಲಿಂಡ‌ರ್ ಕಾರಣಕ್ಕೆ ಮತ್ತಷ್ಟು ಹೋಟೆಲ್‌ಗಳು ಬಾಗಿಲೆಳೆದು ಕೊಂಡಿವೆ. ಸೇವೆ ಮುಂದುವರಿಸಿರುವ ಹೊಟೇಲ್ ಗಳು ಮೆನುವಿನಲ್ಲಿ ಕಡಿತ ಮಾಡಿವೆ.

ವಾಣಿಜ್ಯ ಸಿಲಿಂಡರ್‌ಗಳು ಅಕ್ರಮವಾಗಿ ಮಾರಾಟವಾಗುತ್ತಿದ್ದು, ಬಹುತೇಕರು, ಹೆಚ್ಚು ಗ್ಯಾಸ್‌ ಬಯಸುವ ಆಹಾರ ಪದಾರ್ಥವನ್ನೇ ಸ್ಥಗಿತಗೊಳಿಸುವ ತೀರ್ಮಾನಿಸಿದ್ದಾರೆ.

ಸಿಲಿಂಡರ್ ಸಮಸ್ಯೆ ಸಹಜ ಸ್ಥಿತಿಗೆ ಬರಲಿದೆ ಎನ್ನುವ ವಿಶ್ವಾಸವನ್ನು ಸರಕಾರ ನೀಡುತ್ತಿದ್ದರೂ, ಭಾನುವಾರದ ವೇಳೆಗೆ ಬಹುತೇಕ ಹೋಟೆಲ್‌ಗಳ ಸಂಗ್ರಹ ಖಾಲಿಯಾಗುವ ಆತಂಕವಿದೆ. ಕೆಲ ಹೋಟೆಲ್ ಗಳು ಗ್ಯಾಸ್ ಬದಲಿಗೆ ಸೌದೆ ಬಳಸಿಕೊಂಡು ಕೆಲ ಅಡುಗೆ ಸಾಮಗ್ರಿ ತಯಾರಿಸಲು ಆರಂಭಿಸಿವೆ. ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಕಡೆ ಸೌದೆಯ ಮೊರೆ ಹೋಗಲಾಗಿದೆ. ಇನ್ನು ಕೆಲ ಹೋಟೆಲ್‌ಗಳು ಗ್ಯಾಸ್‌ಗೆಂದು ಪ್ರತ್ಯೇಕ ದರ ವಿಧಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾಳಸಂತೆ ಮಾರಾಟ; ಜಪ್ತಿ

ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆ ಉದ್ದೇಶಕ್ಕೆ ಬಳಸುತ್ತಿದ್ದ ಆರೋಪದಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಟ್ಟು 316 ಸಿಲಿಂಡ‌ರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗದಲ್ಲಿ 3, ಯಾದಗಿರಿ 46, ದಾವಣಗರೆಯಲ್ಲಿ 13 ಸಿಲಿಂಡರ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಗ್ಯಾಸ್ ಸಿಲಿಂಡರ್ ಕೊರತೆ: ದೋಸೆ, ಇಡ್ಲಿ ಬೆಲೆ ಹೆಚ್ಚಳ

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಕೊರತೆ ತೀವ್ರವಾದ ಹಿನ್ನೆಲೆ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ದುಬಾರಿ ಬೆಲೆಗೆ ಸಿಲಿಂಡ‌ರ್ ಖರೀದಿಸಬೇಕಾದ ಅನಿವಾರ್ಯತೆಯಿಂದಾಗಿ ಇಡ್ಲಿ, ದೋಸೆ ಸೇರಿ ದಂತೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿವೆ.

ಅಮೆರಿಕ, ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ ಕೊರತೆಯುಂಟಾಗಿದ್ದು, ನಗರದ ಹೋಟೆಲ್ ಮಾಲೀಕರಿಗೂ ಸಿಲಿಂಡರ್ ಕೊರತೆಯ ಬಿಸಿತಟ್ಟಿದೆ. ಈ ಹಿನ್ನೆಲೆ ಉದ್ಯಮವನ್ನು ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಿರುವುದರಿಂದ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ಮುಟ್ಟಿದೆ.

 

 

Related Articles

Back to top button
error: Content is protected !!