ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ವಿಡಿಯೋ ಮಾಡಿದ ಪತಿ, ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
Views: 142
ಕನ್ನಡ ಕರಾವಳಿ ಸುದ್ದಿ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನೇ ವಿಡಿಯೋ ಮಾಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಕೃಷ್ಣವೇಣಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಘಟನೆ ನಡೆದ ಒಂದು ದಿನದ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಮೃತ ಕೃಷ್ಣವೇಣಿ (30) ನಂದುಲೂರು ಮಂಡಲದಲ್ಲಿ ಕೆಲಸ ಮಾಡುತ್ತಿದ್ದ ಲೋಕೋ ಪೈಲಟ್ ಶ್ರೀರಾಮ್ ಶ್ರೀನಿವಾಸುಲು ಅವರನ್ನು ವಿವಾಹವಾಗಿದ್ದರು. ಮೂಲತಃ ಒಂಗೋಲ್‌ನ ಶ್ರೀನಿವಾಸುಲು, 10 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯ ಮರಣದ ನಂತರ 2016 ರಲ್ಲಿ ಕೃಷ್ಣವೇಣಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ರಾಜಂಪೇಟೆ ತಾಲೂಕಿನ ಬೋಯನಪಲ್ಲಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ದಂಪತಿ ಮಧ್ಯೆ ಆಗುತ್ತಿದ್ದ ಜಗಳದಿಂದಾಗಿ ಕೃಷ್ಣವೇಣಿ ಮಾನಸಿಕವಾಗಿ ಕುಗ್ಗಿದ್ದರು. ಮತ್ತು ಕಳೆದ ಆರು ತಿಂಗಳಿನಿಂದ ಹಲವಾರು ಬಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಲೇ ಇದ್ದರು. ಆದರೂ, ಆಕೆಯ ಪತಿ ಆ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ, ನಿರ್ಲಕ್ಷ್ಯ ಮಾಡಿದ್ದಾರೆ. ಇಬ್ಬರ ಮಧ್ಯೆ ಗಲಾಟೆ ಸಮಯದಲ್ಲಿ ತಮ್ಮನ್ನು ಹೆದರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದು ಪತಿ ಭಾವಿಸಿದ್ದರು ಎಂದು ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರು ಹೇಳಿದ್ದಾರೆ.
ಆದರೆ ಗುರುವಾರ ಇಬ್ಬರ ಮಧ್ಯೆ ಮತ್ತೊಂದು ಕೌಟುಂಬಿಕ ಕಲಹವಾಗಿತ್ತು. ಇಬ್ಬರ ಮಧ್ಯೆ ವಾಗ್ವಾದದ ಬಳಿಕ ಕೃಷ್ಣವೇಣಿ ತಮ್ಮ ಮನೆಯ ಕೋಣೆಯೊಳಗೆ ಬೀಗ ಹಾಕಿಕೊಂಡು ನೇಣಿಗೆ ಶರಣಾಗಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಬಾಗಿಲು ಒಡೆದು ಅಥವಾ ತಕ್ಷಣ ಕಾಪಾಡುವ ಬದಲು, ಕೋಣೆಯ ಹೊರಗೆ ಇದ್ದ ಶ್ರೀನಿವಾಸುಲು ತಮ್ಮ ಮೊಬೈಲ್ ಫೋನ್‌ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದರು.
ವಿಡಿಯೋದಲ್ಲಿ ಶ್ರೀನಿವಾಸುಲು ನಗುತ್ತಿರುವುದು, ಮತ್ತು “ಕೃಷ್ಣ… ಸರಿಯಾಗಿ ನೇಣು ಬಿಗಿದುಕೊ” ಎಂದು ಹೇಳುವುದು ಇದೆ. ಆಕೆ ಗಂಡನನ್ನು ಹೆದರಿಸಲು ಆ ರೀತಿ ಮಾಡಿದ್ದಾಳೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ, ಕ್ಷಣಗಳಲ್ಲಿ ಪರಿಸ್ಥಿತಿ ದುರಂತವಾಗಿದೆ. ಕೃಷ್ಣವೇಣಿ ತಾನು ನಿಂತಿದ್ದ ಹಾಸಿಗೆಯಿಂದ ಕೆಳಗಿಳಿಯುತ್ತಿದ್ದಂತೆ, ಆಕೆಯ ಕುತ್ತಿಗೆಗೆ ಇದ್ದ ಕುಣಿಕೆ ಇದ್ದಕ್ಕಿದ್ದಂತೆ ಬಿಗಿಯಾಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಶ್ರೀನಿವಾಸುಲು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಚಿಲಕವನ್ನು ಮುರಿಯಲು ಸಾಧ್ಯವಾಗಲಿಲ್ಲ. ನಂತರ ನೆರೆಹೊರೆಯವರನ್ನು ಸಹಾಯಕ್ಕಾಗಿ ಕರೆದಿದ್ದಾರೆ. ಸ್ಥಳೀಯರು ಮನೆಗೆ ಧಾವಿಸಿ ಬಾಗಿಲನ್ನು ಒಡೆದು ತೆರೆದಿದ್ದಾರೆ. ಆದರೆ, ಆ ಹೊತ್ತಿಗಾಗಲೇ ಕೃಷ್ಣವೇಣಿ ಸಾವನ್ನಪ್ಪಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.






