ಕುಂದಾಪುರ:10 ವರ್ಷಗಳಿಂದ ತಲೆ ಮರೆಸಿಕೊಂಡ ಆರೋಪಿ ಪಶ್ಚಿಮ ಬಂಗಾಳದಲ್ಲಿ ಸೆರೆ
Views: 54
ಕನ್ನಡ ಕರಾವಳಿ ಸುದ್ದಿ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷ ಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ್ ಶೆಟ್ಟಿ (44) ಎಂಬುವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
2015ರಲ್ಲಿ ಇವರಿಗೆ ಇಲ್ಲಿನ ಯುವತಿ ಯೊಂದಿಗೆ ವಿವಾಹವಾಗಿದ್ದು, 6 ತಿಂಗಳ ಬಳಿಕ ವರದಕ್ಷಿಣೆ ವಿಚಾರದಲ್ಲಿ ಈ ಮದುವೆ ಮುರಿದು ಬಿದ್ದಿತ್ತು ಎನ್ನಲಾಗಿದೆ. ಈ ಸಂಬಂಧ ಪತ್ನಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಗ್ರಾಮಾಂತರ ಠಾಣಾ ಎಎಸ್ ಐ ಶಂಕರ್‌ಎಸ್. ಹಾಗೂ ಹೆಡ್ ಕಾನ್ ಸ್ಟೆಬಲ್ ಅಶೋಕ್ ಶೆಟ್ಟಿ ಅವರ ತಂಡವು ಈತ ಮುರ್ಷಿ ದಾಬಾದ್ ಜಿಲ್ಲೆಯ ಬನಿನಾಥಪುರ ಎಂಬಲ್ಲಿ ಇರುವುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ. ಈತ ಅಲ್ಲಿನ ಯುವತಿಯನ್ನು ಮದುವೆಯಾಗಿರುವ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಕುಂದಾಪುರ ಪ್ರಥಮ ಸಿವಿಲ್ ಹಾಗೂ ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿಯನ್ನು ಹಿರಿಯಡ್ಕದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.






