ಸ್ವಿಮ್ಮಿಂಗ್ ಪೂಲ್ ನಲ್ಲಿ ಮಗಳು ಮುಳುಗಿ ಸಾವು ಎಂದು ನಾಟಕವಾಡಿದ್ದ ಭಾರತ ಮೂಲದ ವೈದ್ಯೆ ಬಂಧನ
Views: 106
ಕನ್ನಡ ಕರಾವಳಿ ಸುದ್ದಿ : 4 ವರ್ಷದ ಮಗಳನ್ನು ಕೊಂದು ಬಳಿಕ ಆಕೆಯನ್ನು ಸ್ವಿಮ್ಮಿಂಗ್ ಪೂಲ್ ಗೆ ಹಾಕಿ ಆಕೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ ಎಂದು ನಾಟಕವಾಡಿದ್ದ ಭಾರತ ಮೂಲದ ವೈದ್ಯೆಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಮಕ್ಕಳ ತಜ್ಞೆ 37 ವರ್ಷದ ಡಾ. ನೇಹಾ ಗುಪ್ತಾ ಕೊಲೆಗೈದ ಪಾಪಿ ತಾಯಿ. 4 ವರ್ಷದ ಆರಿಯಾ (4) ಕೊಲೆಯಾಗಿರುವ ಮಗು. ಭಾರತದ ಮೂಲದ ವೈದ್ಯೆಯಾಗಿರುವ ಡಾ.ನೇಹಾ ಅವರು ಫ್ಲೋರಿಡಾದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆಕೆಯದ್ದು ಆಕಸ್ಮಿಕ ಸಾವು ಎಂದು ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ.
ಮಗಳು ಸಾವನ್ನಪ್ಪಿದ ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ನೇಹಾ ಗುಪ್ತಾ, ನಾವು ಮಲಗಿದ್ದೆವು, ನನಗೆ ಏನೋ ಶಬ್ದ ಕೇಳಿಸಿತು. ಅವಳು ಈಜುಕೊಳದಲ್ಲಿ ಬಿದ್ದಿದ್ದಳು. ನಾನು ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ ನನಗೆ ಈಜಲು ಬರುವುದಿಲ್ಲ. ಹಾಗಾಗಿ ಅವಳನ್ನು ಹೊರಗೆ ತರಲು ಸಾಧ್ಯವಾಗಲಿಲ್ಲ ಎಂದಿದ್ದಳು.
ಆದರೆ, ಶವಪರೀಕ್ಷೆಯ ಸಮಯದಲ್ಲಿ ಬಾಲಕಿಯ ಶ್ವಾಸಕೋಶ ಅಥವಾ ಹೊಟ್ಟೆಯಲ್ಲಿ ನೀರು ಕಂಡುಬಂದಿಲ್ಲ. ಅವಳನ್ನು ಸ್ವಿಮ್ಮಿಂಗ್ ಪೂಲ್ ಗೆ ಹಾಕುವ ಮೊದಲೇ ಅವಳು ಸತ್ತಿದ್ದಾಳೆಂಬ ವಿಚಾರ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ನೇಹಾ ಗುಪ್ತಾ ಕೊಲೆ ಮಾಡಿರುವುದು ಬಯಲಾಗಿದ್ದು, ಸದ್ಯ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.






