ರೆಸಾರ್ಟ್ ಈಜುಕೊಳದಲ್ಲಿ ಈಜಾಡಲು ಹೋಗಿ ಮಹಿಳೆ ದಾರುಣ ಸಾವು
Views: 38
ಕನ್ನಡ ಕರಾವಳಿ ಸುದ್ದಿ: ರೆಸಾರ್ಟ್‌ನ ಈಜುಕೊಳದಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಮಹಿಳೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಂತಡಪಿ ಗ್ರಾಮದ ಬಳಿ ನಡೆದಿದೆ.
ಕುಂದಲಗುರ್ಕಿ ಗ್ರಾಮದ ರೇಖಾ (37) ಮೃತ ಮಹಿಳೆ. ರೇಖಾ ಎನ್‌ಜಿಓ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯ ವತಿಯಿಂದ ಚಿಂತಡಪಿ ಗ್ರಾಮದ ರೆಸಾರ್ಟ್ ನಲ್ಲಿ 2 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ರೇಖಾ ಸಂಜೆ 6 ಗಂಟೆಯ ನಂತರ ಈಜುಕೊಳದಲ್ಲಿ ಈಜಾಡುವ ಸಲುವಾಗಿ ಧುಮುಕಿದ್ದಾರೆ. ಆದರೆ ದುರಾದೃಷ್ಟವಶಾತ್ ಈಜು ಬರುತ್ತಿದ್ದರೂ ಆಕೆ ಮುಳುಗಿ ಸಾವನ್ನಪ್ಪಿದ್ದಾರೆ.
ಕೆಲಕಾಲ ನೀರಿನಲ್ಲಿ ಧುಮುಕಿರುವ ಮಹಿಳೆ ರೇಖಾ ಈಜಾಡುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಕೆಲ ನಿಮಿಷಗಳ ಕಾಲ ಮೇಲೆ ಬರದೆ ನೀರಲ್ಲೇ ಮುಳುಗಿದ್ದರಿಂದ ಅನುಮಾನಗೊಂಡ ಸಹೋದ್ಯೋಗಿಗಳು ನೀರಿನಿಂದ ಮೇಲೆ ಎತ್ತಿಕೊಂಡು ಬಂದಿದ್ದಾರೆ.
ಕೂಡಲೇ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲೇ ಮಹಿಳೆ ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಮುಂಜಾಗ್ರತಾ ರಕ್ಷಣಾ ಕವಚಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಮೇಲೆ ರೆಸಾರ್ಟ್ ಮಾಲೀಕರು, ಹಾಗೂ ರೇಖಾರನ್ನು ಕೆರೆದುಕೊಂಡು ಹೋಗಿದ್ದ ಸಂಸ್ಥೆಯ ವಿರುದ್ಧ ಕೂಡಾ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






