ಕುಂದಾಪುರ: ಬಾಲಕನ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಪ್ರಕರಣ : ಇಬ್ಬರು ಸೆರೆ
Views: 300
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಪೇಟೆಯಲ್ಲಿ ಕಟಿಂಗ್ ಶಾಪ್‌ನಲ್ಲಿ ನಡೆದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪ್ರಚೋದನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕಂಡ್ಲೂರು ಪೇಟೆಯಲ್ಲಿರುವ ಕಟಿಂಗ್ ಶಾಪ್‌ನಲ್ಲಿ ಹೇಳಿದ ವಿಷಯವನ್ನು ಕೆಲವರು ವಿಡಿಯೋ ಮಾಡಿ, ಸಾರ್ವಜನಿಕರನ್ನು ಪ್ರಚೋದನೆಗೊಳಿಸಿ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂಬ ದೂರನ್ನು ಬಾಲಕನ ತಂದೆ ನೀಡಿದ್ದರು.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಈ ವಿಚಾರಕ್ಕೆ ಸಂಬಂಧಿಸಿ ಕಟಿಂಗ್ ಶಾಪ್ ಎದುರು 20-30 ಜನರು ಗುಂಪುಗೂಡಿ ಬೆದರಿಕೆ ಹಾಕಿರುವ ಬಗ್ಗೆ ಶಾಪ್ ಮಾಲೀಕ ಶಶಾಂಕ ಭಂಡಾರಿ ನೀಡಿದ ದೂರಿನ ಮೇರೆಗೆ ಮತ್ತೊಂದು ಪ್ರಕರಣವೂ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 20-30 ಜನರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಶಾಂಕ ಭಂಡಾರಿ (30) ಮತ್ತು ಪ್ರಮೋದ ಡಿಸೋಜ (25) ಬಂಧಿತರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






