ಇತರೆ

ಜ್ಯೋತಿಷ್ಯ ಹೇಳಿ, ದೋಷ ನಿವಾರಣೆ ವೇಳೆ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ,ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Views: 43

ಕನ್ನಡ ಕರಾವಳಿ ಸುದ್ದಿ: ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಪ್ರಕರಣದಲ್ಲಿ ಜ್ಯೋತಿಷಿಯೊಬ್ಬರಿಗೆ 200 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಗಂಗಾ ಜಿಲ್ಲಾ ಪೋಕ್ಸೋ ತ್ವರಿತ ನ್ಯಾಯಾಲಯವು ತೀರ್ಪು ನೀಡಿದೆ.

ಶಿವಗಂಗಾ ಜಿಲ್ಲೆಯ ಮನಗಿರಿ ಪ್ರದೇಶದ ರಾಮಕೃಷ್ಣನ್ (52) ಶಿಕ್ಷೆಗೆ ಒಳಗಾದ ಜ್ಯೋತಿಷಿ. ಜ್ಯೋತಿಷ್ಯ ಹೇಳುವುದು ಮತ್ತು ದೋಷ ನಿವಾರಣೆಗೆ ಪರಿಹಾರ ಪೂಜೆ ನಡೆಸುವುದನ್ನು ರಾಮಕೃಷ್ಣನ್ ವೃತ್ತಿಯಾಗಿ ಮಾಡಿಕೊಂಡಿದ್ದ.

ನವೆಂಬರ್ 2021ರಲ್ಲಿ, ಮಹಿಳೆಯೊಬ್ಬರು ತನ್ನ 18 ಮತ್ತು 14 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಓದಿನಲ್ಲಿ ಹಿಂದಿದ್ದು, ಇದಕ್ಕೆ ಪರಿಹಾರ ಸೂಚಿಸುವಂತೆ ಈ ಜ್ಯೋತಿಷಿಯ ಸಂಪರ್ಕ ಮಾಡಿದ್ದಳು. ಕೆಲವು ಆಚರಣೆಗಳಿದ್ದು, ಪರಿಹಾರಕ್ಕಾಗಿ ಇಬ್ಬರು ಹೆಣ್ಣುಮಕ್ಕಳನ್ನು ತನ್ನ ಮನೆಗೆ ಕರೆತರುವಂತೆ ಜ್ಯೋತಿಷಿ ಸೂಚಿಸಿದ್ದನು. ಇದನ್ನು ನಂಬಿದ ಮಹಿಳೆ, ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಆತನ ಮನೆಗೆ ಕರೆದೊಯ್ದಿದ್ದಳು.

ಅಲ್ಲಿ, ಮಹಿಳೆಯನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲು ಹೇಳಿದ್ದ ಜ್ಯೋತಿಷಿ, ಇಬ್ಬರು ಬಾಲಕಿಯರನ್ನು ಬೇರೆ ಕೋಣೆಗೆ ಕರೆದೊಯ್ದು, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಇದಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಿದರೆ ಪೋಷಕರ ಜೀವವನ್ನು ತೆಗೆಯಲಾಗುತ್ತದೆ ಎಂದು ಬೆದರಿಕೆ ಹಾಕಿದ್ದರಿಂದ ಭಯಭೀತರಾದ ಹುಡುಗಿಯರು, ಹಲವು ದಿನಗಳ ಕಾಲ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಸುಮಾರು ಎರಡು ವರ್ಷಗಳ ನಂತರ, ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ನಡೆಸಲಾದ ವೈದ್ಯಕೀಯ ಪರೀಕ್ಷೆಯಲ್ಲಿ, ಅವರಿಗೆ ಲೈಂಗಿಕವಾಗಿ ಹರಡುವ ರೋಗವಿದೆ ಎಂದು ಗೊತ್ತಾಗಿತ್ತು.

ಬಳಿಕ ಸೂಕ್ಷ್ಮವಾಗಿ ಕೇಳಿದಾಗ ನಡೆದ ಘಟನೆ ಗೊತ್ತಾಗಿದೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಲೈಂಗಿಕ ದೌರ್ಜನ್ಯ ಎಸಗಿದ ಜೋತಿಷಿ ವಿರುದ್ಧ ತಿರುಪತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರು. ದಾಖಲಾದ ದೂರು ಆಧರಿಸಿ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಶಿವಗಂಗಾ ಜಿಲ್ಲಾ ಪೋಕ್ಸೋ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯು ಇಂದು ತೀರ್ಪು ಪ್ರಕಟಿಸಿದೆ. “ಆರೋಪಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಜ್ಯೋತಿಷಿ ರಾಮಕೃಷ್ಣನ್ ಅವರಿಗೆ 200 ವರ್ಷಗಳ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ನ್ಯಾಯಾಲಯದ ನ್ಯಾಯಾಧೀಶ ಗೋಕುಲ್ ಮುರುಗನ್ ಅವರು ತೀರ್ಪು ನೀಡಿದ್ದಾರೆ.

“ತಮಿಳುನಾಡು ರಾಜ್ಯ ಸರ್ಕಾರವು ಸಂತ್ರಸ್ತ ಇಬ್ಬರು ಬಾಲಕಿಯರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು” ಎಂದೂ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!