ಇತರೆ
ಟ್ರಾಕ್ಟರ್ ಟ್ರ್ಯಾಲಿ ತುಂಡಾಗಿ ಕಂದಕಕ್ಕೆ ಉರುಳಿ ನಾಲ್ವರ ಸಾವು, 10 ಮಂದಿ ಗಾಯ
Views: 21
ಕನ್ನಡ ಕರಾವಳಿ ಸುದ್ದಿ: ಟ್ರ್ಯಾಲಿ ತುಂಡಾಗಿ ಟ್ರಾಕ್ಟರ್ ಕಂದಕಕ್ಕೆ ಉರುಳಿ ಬಿದ್ದು ಸ್ಥಳದಲ್ಲಿಯೇ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ಜಮಖಂಡಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಯುವತ್ಮಾಳ್ ಜಿಲ್ಲೆ ಬೂಸಾ ತಾಲೂಕಿನ ಗುಪವಾಡಿ ನಿವಾಸಿಗಳಾದ ಹಲಕಿ ಪಾಂಡೆ(2), ಮನೀಷ್ ಪಾಂಡೆ(23), ಲಕ್ಷ್ಮಿ ಚಿರಮಡಿ(27) ಮತ್ತು ರೇಖಾ ಭೂಕೆ ಮೃತಪಟ್ಟವರು,ಗಾಯಗೊಂಡಿರುವ 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮಖಂಡಿ ನಗರದ ಕಟ್ಟೆ ಕೆರೆ ಬಳಿ ಇಳಿಜಾರು ರಸ್ತೆ ಇದ್ದು, ತಿರುವಿನ ಸಮಯದಲ್ಲಿ ಚಾಲಕನ ಅಜಾಗರೂಕತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮುಂಜಾನೆ 2 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು, ಪೊಲೀಸ್ ಸಿಬ್ಬಂದಿ ಸಹಾಯದಿಂದ ಗಾಯಗೊಂಡವರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡಲಾಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಜಮಖಂಡಿ ಪೊಲೀಸ್ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.






